ಬಹು ದಿನಗಳಿಂದ ಚರ್ಚೆಯಲ್ಲಿದ್ದ ಯೋಜನೆಗೆ ಕೊನೆಗೂ ಅನುಮೋದನೆ ದೊರೆತಿದೆ. ಹೌದು, ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಯೋಜನೆಗೆ ಶೀಘ್ರ ಚಾಲನೆ ನೀಡುವುದಾಗಿ ಚುನಾವಣಾ ಆಯೋಗ ಹೇಳಿದೆ. ಮಂಗಳವಾರ ಗೃಹ, ಕಾನೂನು, ಮಾಹಿತಿ-ತಂತ್ರಜ್ಞಾನ ಸೇರಿದಂತೆ ವಿವಿಧ ಸಚಿವಾಲಯಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಆಯೋಗ ಈ ನಿರ್ಧಾರಕ್ಕೆ ಬಂದಿದೆ.
ಮತದಾರರ ಪಟ್ಟಿಯಲ್ಲಿ ಇದ್ದಕ್ಕಿದ್ದಂತೆ ಸಾವಿರಾರು ಹೆಸರುಗಳು ಕಾಣಿಸಿಕೊಳ್ಳುತ್ತವೆ ಮತ್ತು ನಕಲಿ ಮತದಾರರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಅದನ್ನು ತಡೆಯಲು ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳು ಆಗಾಗ ಆರೋಪಿಸುತ್ತಲೇ ಬಂದಿವೆ. ಅದರಲ್ಲೂ, ದೆಹಲಿ ವಿಧಾನಸಭೆ ಚುನಾವಣೆಯ ಮುನ್ನ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮತ್ತೆಮತ್ತೆ ಈ ಬಗೆಯ ಆರೋಪ ಮಾಡಿ, ‘ಕೆಲವೆಡೆ ಸಾವಿರಾರು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದರೆ, ಮತ್ತೊಂದೆಡೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಸಾವಿರಾರು ಹೆಸರುಗಳು ಹೊಸದಾಗಿ ಸೇರ್ಪಡೆಯಾಗಿವೆ’ ಎಂದಿದ್ದರು.
‘ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅವಧಿಯ ಐದು ತಿಂಗಳಲ್ಲೇ 39 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಆದರೆ, ಕಳೆದ ಐದು ವರ್ಷಗಳಲ್ಲಿ ಬರೀ 32 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಭಾರತದ ಚುನಾವಣಾ ವ್ಯವಸ್ಥೆ ಬಲಿಷ್ಠ, ಪಾರದರ್ಶಕವಾಗಿದೆ. ಇದನ್ನು ಮತ್ತಷ್ಟು ಶಕ್ತಿಶಾಲಿಗೊಳಿಸಲು ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದೇನಿದ್ದರೂ, ಮತದಾರರ ಗುರುತಿನ ಚೀಟಿಯನ್ನು ಆಧಾರ್ನೊಂದಿಗೆ ಜೋಡಣೆ ಮಾಡುವುದರಿಂದ ಅಕ್ರಮ ಮತದಾರ ಚೀಟಿಯನ್ನು ರದ್ದುಗೊಳಿಸಲು, ಚುನಾವಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ನೆರವಾಗಲಿದೆ.
‘ಈ ಪ್ರಕ್ರಿಯೆಯನ್ನು ಆರಂಭಿಸಲು ಯುಐಡಿಎಐ ಮತ್ತು ಚುನಾವಣಾ ಆಯೋಗದ ತಾಂತ್ರಿಕ ತಜ್ಞರು ಶೀಘ್ರವೇ ಸಮಾಲೋಚನೆ ನಡೆಸಲಿದ್ದಾರೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. 2015ರಿಂದಲೇ ಈ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ, 2023ರ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಕೈಬಿಡಲಾಗಿತ್ತು. ದೇಶದಲ್ಲಿ 97.97 ಕೋಟಿಗೂ ಅಧಿಕ ಮತದಾರರ ನೊಂದಣಿಯಾಗಿದ್ದು, 2024ರ ಏಪ್ರಿಲ್-ಮೇ-ಜೂನ್ನಲ್ಲಿ ನಡೆದ 18ನೇ ಲೋಕಸಭೆ ಚುನಾವಣೆಯ ವೇಳೆ 10.52 ಲಕ್ಷ ಮತಗಟ್ಟೆಗಳಲ್ಲಿ 64.64 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ, 97 ಕೋಟಿಗೂ ಅಧಿಕ ಮತದಾರರು ಹೊಂದಿರುವ ಭಾರತದಲ್ಲಿ ಇದರ ಅನುಷ್ಠಾನದ ಹಾದಿ ಸವಾಲಿನಿಂದ ಕೂಡಿದೆ.
ಪರಿಷ್ಕರಣೆ ಮತ್ತು ಜೋಡಣೆಯ ವೇಳೆ ನಿಜವಾದ ಮತದಾರರ ಹೆಸರು ಬಿಟ್ಟುಹೋಗಬಾರದು ಮತ್ತು ಬಡವರು, ವಲಸಿಗ ಕಾರ್ವಿುಕರಿಗೆ ಸಮಸ್ಯೆಯಾಗಬಾರದು. ಆಧಾರ್ ಕಾರ್ಡ್ ಇಲ್ಲದವರು ದಾಖಲೆಯಾಗಿ ಪ್ಯಾನ್ ಕಾರ್ಡ್, ಡ್ರೖೆವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಪ್ರಸ್ತುತಪಡಿಸಲು ಅವಕಾಶವಿದೆ. ಆದರೆ, ಯೋಜನೆ ಜಾರಿಗೆ ಮುನ್ನವೇ ಪ್ರಾಯೋಗಿಕ ತೊಡಕುಗಳನ್ನು, ತಾಂತ್ರಿಕ ಅಡಚಣೆಗಳನ್ನು ನಿವಾರಿಸಿಕೊಳ್ಳುವುದು ಅಗತ್ಯ.