ನ್ಯೂಸ್

ಬರಹಗಾರರಿಗೆ ಟ್ವಿಟರ್​ನಿಂದ ಸಂತಸದ ಸಂಗತಿ!; ಬರಲಿವೆ ಬಹುನಿರೀಕ್ಷಿತ ಈ ಎರಡು ಸೌಲಭ್ಯಗಳು..

ಬೆಂಗಳೂರು: ಎಲಾನ್​ ಮಸ್ಕ್​ ಟ್ವಿಟರ್ ಮಾಲೀಕತ್ವ ಹೊಂದಿದ ಮೇಲೆ ಟ್ವಿಟರ್​ ಭಾರಿ ಸದ್ದಿನಲ್ಲಿದ್ದು, ಈ ಮೈಕ್ರೋಬ್ಲಾಗಿಂಗ್ ಸೈಟ್​ನಲ್ಲಿ ಬಹಳಷ್ಟು ಬದಲಾವಣೆಗಳೂ ಆಗಲಾರಂಭಿಸಿವೆ. ಅದರಲ್ಲೂ ಎರಡು ಬಹುನಿರೀಕ್ಷಿತ ಸೌಲಭ್ಯವನ್ನು ನೀಡಲಿರುವುದಾಗಿ ಮಸ್ಕ್​ ಘೋಷಿಸಿರುವುದು ಕುತೂಹಲ ಮೂಡಿಸಿದೆ.

ಪ್ರಪಂಚದ ನಿಖರ ಮಾಹಿತಿಯ ಮೂಲವಾಗಬೇಕು ಎಂಬ ನಿಟ್ಟಿನಲ್ಲಿ ಟ್ವಿಟರ್​ ರೂಪುಗೊಳಿಸಲಾಗುತ್ತಿದೆ ಎಂದಿರುವ ಮಸ್ಕ್, ವ್ಯಾಪಕ ವೆರಿಫಿಕೇಷನ್​ನಿಂದ ಪತ್ರಿಕೋದ್ಯಮದ ಪ್ರಜಾಪ್ರಭುತ್ವಕ್ಕೆ ಮತ್ತು ಸಾವರ್ಜನಿಕರ ಧ್ವನಿ ಎತ್ತಿ ಹಿಡಿಯಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಟ್ವಿಟರ್ ಬಗ್ಗೆ ಇರುವ ದೊಡ್ಡ ನಿರೀಕ್ಷೆ ಎಂದರೆ ಟೆಕ್ಸ್ಟ್​ ಲಿಮಿಟ್. ಆರಂಭದಲ್ಲಿ 140 ಕ್ಯಾರೆಕ್ಟರ್​ಗೆ ಸೀಮಿತವಾಗಿದ್ದ ಟ್ವಿಟರ್​ ನಂತರ ಆ ಸಾಮರ್ಥ್ಯವನ್ನು ದುಪ್ಟಟ್ಟುಗೊಳಿಸಿದ್ದರಿಂದ, ಈಗ 280 ಕ್ಯಾರೆಕ್ಟರ್​ ವರೆಗೆ ಬರೆಯಬಹುದಾಗಿದೆ. ಶೀಘ್ರದಲ್ಲೇ ಲಾಂಗ್​ಫಾರ್ಮ್​ ಟೆಕ್ಸ್ಟ್​ಗೂ ಅವಕಾಶ ಕೊಡುವುದಾಗಿ ಮಸ್ಕ್ ಹೇಳಿರುವುದು, ಇನ್ನುಮುಂದೆ ಉದ್ದುದ್ದದ ಬರಹಗಳಿಗೂ ಟ್ವಿಟರ್​ನಲ್ಲಿ ವೇದಿಕೆ ಸಿಗಲಿದೆ. ಸದ್ಯ ಜಾಸ್ತಿ ಬರೆದವರು ಅವನ್ನು ಒಂದೇ ಟ್ವೀಟ್​ನಲ್ಲಿ ಹಾಕಲಾಗದೆ ಸ್ಕ್ರೀನ್​ಶಾಟ್​ ತೆಗೆದು ಇಲ್ಲವೇ ಫೋಟೋ ಮಾದರಿಯಲ್ಲಿ ಬರಹವನ್ನು ಪೋಸ್ಟ್​ ಮಾಡುತ್ತಿದ್ದಾರೆ.

ಇನ್ನೊಂದೆಡೆ ಸದ್ಯದ ಬಹುತೇಕ ಸೋಷಿಯಲ್​ ಮೀಡಿಯಾಗಳಲ್ಲಿ ಕ್ರಿಯೇಟರ್​ ಮಾನಿಟೈಸೇಷನ್​ ಎಂದರೆ ಅದು ವಿಡಿಯೋ ಕಂಟೆಂಟ್ ಕ್ರಿಯೇಟರ್ಸ್​ಗೆ ಮಾತ್ರ ಎನ್ನುವಂತಿದೆ. ಆದರೆ ಎಲ್ಲ ಥರದ ಕಂಟೆಂಟ್​​ಗಳಿಗೂ ಕ್ರಿಯೇಟರ್ ಮಾನಿಟೈಸೇಷನ್​ ಕೊಡುವುದಾಗಿ ಮಸ್ಕ್ ಹೇಳಿರುವುದು, ಬರೀ ಬರವಣಿಗೆಯಲ್ಲೇ ಹೆಚ್ಚು ತೊಡಗಿಸಿಕೊಳ್ಳುವವರಲ್ಲಿ ನಿರೀಕ್ಷೆ ಮೂಡಿಸಿದೆ. ಮುಂದೆ ಬರಹಕ್ಕೂ ಮಾನಿಟೈಸೇಷನ್ ಇರಬಹುದೇ ಎಂಬ ಕುತೂಹಲ ಮೂಡಿದೆ.