ಹೈದರಾಬಾದ್: ಬಿರಿಯಾನಿ, ಪಿಝಾ, ಐಸ್ಕ್ರೀಮ್, ಊಟ, ಉಪಹಾರಗಳನ್ನಷ್ಟೇ ಮನೆಬಾಗಿಲಿಗೆ ತರಿಸಿಕೊಳ್ಳೋದಕ್ಕೆ ಆ್ಯಪ್ಗಳಿದ್ದವು. ಈಗ ಕುಡುಕರನ್ನು ಗಮನದಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು ಪೂರೈಸುವುದಕ್ಕೆ ಒಂದು ಸ್ಟಾರ್ಟಪ್ ಹೈದರಾಬಾದ್ನಲ್ಲಿ ಹುಟ್ಟಿಕೊಂಡಿದೆ. ಅದರ ಹೆಸರು 'ಬೂಝೀ' !
ಕುಡುಕರ ಮಟ್ಟಿಗೆ ಇದು ಶುಭ ಸಮಾಚಾರ. ಜಗತ್ತಿನ ಮೊದಲ ಆನ್ಲೈನ್ ಸೋಷಿಯಲ್ ಡ್ರಿಂಕಿಂಗ್ ಪ್ಲಾಟ್ಫಾರಂ ಅನ್ನು 'ಬೂಝೀ' ಅನಾವರಣಗೊಳಿಸಿದೆ. ಇದು ವೆಬ್ಸೈಟ್ ಮತ್ತು ಆ್ಯಪ್ ಆಧಾರಿತ ವೇದಿಕೆಯಾಗಿ ಕೆಲಸ ಮಾಡುತ್ತದೆ. ವಿವೇಕಾನಂದ ಬಲಿಜೆಪಳ್ಳಿ, ಸುಸೋವನ್ ಮಜುಂದಾರ್ ಇದರ ಸಂಸ್ಥಾಪಕರು. ಹೈದರಾಬಾದ್ನಲ್ಲಿ ಕುಡುಕರಿಗೆ ಸೇವೆ ಒದಗಿಸುವುದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಶೀಘ್ರವೇ ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾದಲ್ಲೂ ಅನುಮತಿ ಸಿಗಲಿದೆ ಎಂಬ ವಿಶ್ವಾಸ ಬೂಝೀಗೆ ಇದೆ.
ಹೊಣೆಗಾರಿಕೆ ಅರಿತ ಮದ್ಯಸೇವನೆ, ವಿಶೇಷ ಸೇವೆಗಳು, ಪ್ರತಿ ನಗರಗಳಲ್ಲಿರುವ ಬಾರ್ ಕುರಿತ ಮಾಹಿತಿ, ಕ್ಲಬ್ ಗಳ ವಿವರ, ಅಲ್ಲಿ ಲಭ್ಯವಿರುವ ಆಫರ್, ಇವೆಂಟ್ ಇತ್ಯಾದಿಗಳೆಲ್ಲವೂ ಒಂದೇ ಕಡೆ ಸಿಗುತ್ತದೆ. ರಾಜ್ಯವಾರು ದರ ಪಟ್ಟಿಯೂ ಇದರಲ್ಲಿ ಇದೆ. ಆನ್ಲೈನ್ ನಲ್ಲಿ ಆರ್ಡರ್ ಮಾಡುವವರಿಗೆ ಆಫರ್ಗಳು ಸಿಗಲಿವೆ. ಇತರೆ ಆಹಾರ ಪೂರೈಕೆ ಆ್ಯಪ್ಗಳಂತೆಯೇ ಇದು ಕೆಲಸ ಮಾಡಲಿದೆ. ಮಾರಾಟ ಮಳಿಗೆಗಳಿಂದ ಈ ಕೆಲಸಕ್ಕಾಗಿ ಕಮಿಷನ್ ಪಡೆದುಕೊಳ್ಳಲಿದೆ. ಮುಂದಿನ 12 ತಿಂಗಳ ಅವಧಿಯಲ್ಲಿ 1,000 ಉದ್ಯೋಗ ಸೃಜನೆಯ ಉದ್ದೇಶವೂ ಕಂಪನಿಯದ್ದು.
ಸೋಷಿಯಲ್ ಪ್ಲಾಟ್ಫಾರಂನಲ್ಲಿ ಪ್ರತಿಯೊಂದು ಮದ್ಯದ ಬಗ್ಗೆಯೂ ಅವರವರ ಅನುಭವಗಳನ್ನು ಹಂಚಿಕೊಳ್ಳಬಹುದಾಗಿದೆ. ಯಾವ ಬ್ರ್ಯಾಂಡ್ ನ ಡ್ರಿಂಕ್ ಯಾವ ರೀತಿ ಇದೆ. ಅದರ ರುಚಿ, ಕುಡಿದಾಗಿನ ಅನುಭವ ಇತ್ಯಾದಿ ಫೀಡ್ ಬ್ಯಾಕ್ಗೆ ಬೂಝೀ ಅವಕಾಶ ನೀಡಿದೆ. (ಏಜೆನ್ಸೀಸ್)