ನ್ಯೂಸ್

Gold-Silver Price: ನವರಾತ್ರಿಯ ಮೊದಲ ದಿನವೇ ಚಿನ್ನ, ಬೆಳ್ಳಿ ಬೆಲೆ ಏರಿಕೆ! ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟು?

ನವದೆಹಲಿ: ದೇಶದಲ್ಲಿ, ಹಬ್ಬಗಳ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ(Gold-Silver Price)ಯನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ನವರಾತ್ರಿ ಅಥವಾ ದಸರಾ ಪ್ರಾರಂಭವಾಗುತ್ತಿದ್ದಂತೆ ಬೆಲೆ ಏರಿಕೆ ಕಂಡುಬಂದಿದೆ.

ಹಬ್ಬದ ಸೀಸನ್‌ ಹೊಸ್ತಿಲಲ್ಲೇ ಚಿನ್ನ, ಬೆಳ್ಳಿ ಬೆಲೆ ಗಗನಮುಖಿಯಾಗುವ ಲಕ್ಷಣ ಗೋಚರಿಸಿದೆ. ನವರಾತ್ರಿ ಪೂಜೆಗಳು ಗುರುವಾರ(ಅ.3)ರಿಂದ ಪ್ರಾರಂಭವಾಗುತ್ತಿದ್ದಂತೆ ಇವೆರಡೂ ಲೋಹಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿವೆ. ಗುರುವಾರ ದೇಶದ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನ 78,300 ರೂ.ಗೆ ತಲುಪಿದೆ. ಬೆಳ್ಳಿ ಕೆಜಿಗೆ 93,165 ರೂ.ಗೆ ತಲುಪಿದೆ. ಹಬ್ಬ ಹರಿದಿನಗಳಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಬೆಲೆಬಾಳುವ ಲೋಹಗಳ ಬೆಲೆ ಹೆಚ್ಚಾಗುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. .

ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು? Gold-Silver Price

ಆಲ್ ಇಂಡಿಯಾ ಬುಲಿಯನ್ ಅಸೋಸಿಯೇಷನ್ ​ಪ್ರಕಾರ, ಚಿನ್ನದ ಬೆಲೆ 10 ಗ್ರಾಂಗೆ 200 ರೂಪಾಯಿ ಏರಿಕೆಯಾಗಿ 78,300 ರೂಪಾಯಿಗೆ ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾದಂತಾಗಿದೆ. ಮಂಗಳವಾರ ಪ್ರತಿ 10 ಗ್ರಾಂ ಚಿನ್ನ 78,100 ರೂ. ಇತ್ತು.

ಬೆಳ್ಳಿ ಕೂಡ ಪ್ರತಿ ಕೆಜಿಗೆ 665 ರೂಪಾಯಿ ಏರಿಕೆಯಾಗಿ 93,165 ರೂಪಾಯಿಗಳಿಗೆ ತಲುಪಿದೆ. ಮಂಗಳವಾರ ಒಂದು ಕೆಜಿ ಬೆಳ್ಳಿಯ ಬೆಲೆ ಕೆಜಿಗೆ 92,500 ರೂ. ಇತ್ತು.

‘ನವರಾತ್ರಿ’ಯ ಆರಂಭದಲ್ಲಿ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದ್ದರಿಂದ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ ವರ್ತಕರು. ವಾಸ್ತವವಾಗಿ, ಹಿಂದೂ ಪುರಾಣಗಳಲ್ಲಿ, ನವರಾತ್ರಿಯ ಸಮಯದಲ್ಲಿ ಹೊಸ ವಸ್ತುಗಳನ್ನು, ವಿಶೇಷವಾಗಿ ಅಮೂಲ್ಯವಾದ ಲೋಹಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.