ನ್ಯೂಸ್

2025ರಲ್ಲಿ ಚಿನ್ನದ ಬೆಲೆ 88 ಸಾವಿರಕ್ಕೆ? ಹೀಗಿದೆ ವರದಿ

ನವದೆಹಲಿ: ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂಗೆ ಈಗಾಗಲೇ 75 ಸಾವಿರದ ಗಡಿ ದಾಟಿದೆ. ಆದರೆ, ಚಿನ್ನದ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, 2025ರ ಜೂನ್-ಜುಲೈ ಹೊತ್ತಿಗೆ 88 ಸಾವಿರದ ಗಡಿ ದಾಟಲಿದೆ.

ಅಮೆರಿಕದ ಫೈನಾನ್ಶಿಯಲ್ ಸರ್ವಿಸ್ ಫಮ್ರ್ ಸಿಟಿ ಬ್ಯಾಂಕ್​ನ ತಾಜಾ ವರದಿಯ ಪ್ರಕಾರ, 2025ರ ಮಧ್ಯದ ಹೊತ್ತಿಗೆ ಪ್ರತಿ ಔನ್ಸ್ ಚಿನ್ನದ ಬೆಲೆ 3 ಸಾವಿರ ಡಾಲರ್​ಗೆ (2.5 ಲಕ್ಷ ರೂಪಾಯಿ) ತಲುಪಲಿದೆ. ಇದರ ಆಧಾರದಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ದರವು 88,450 ರೂ.ಗೆ ತಲುಪಲಿದೆ. ಅಂದರೆ, ಈಗಿರುವ ದರಕ್ಕಿಂತ ಒಂದೇ ವರ್ಷದಲ್ಲಿ 22-23% ಹೆಚ್ಚಲಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇಳಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವರ್ಷಾಂತ್ಯದ ಹೊತ್ತಿಗೆ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಲಿದೆ ಎಂದು ವರದಿ ವಿವರಿಸಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜೂನ್​ನಲ್ಲಿ ಚಿನ್ನಾಭರಣ ರಫ್ತು ಇಳಿಕೆ

ದೇಶದ ಹರಳು ಮತ್ತು ಚಿನ್ನಾಭರಣ ರಫ್ತು ಜೂನ್ ತಿಂಗಳಲ್ಲಿ ಶೇಕಡ 13ರಷ್ಟು ಇಳಿಕೆಯಾಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ನಡುವೆಯೂ ಜೂನ್​ನಲ್ಲಿ 15,939 ಕೋಟಿ ಮೌಲ್ಯದ ರಫ್ತು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 18,413 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತಾಗಿತ್ತು ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ (ಜೆಜೆಇಪಿಸಿ) ತಿಳಿಸಿದೆ. ಕತ್ತರಿಸಿದ ಮತ್ತು ಪಾಲಿಷ್ ಮಾಡಿದ ವಜ್ರಗಳ ರಫ್ತು ಮೌಲ್ಯವು 8,496 ಕೋಟಿ ರೂ. ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.25ರಷ್ಟು ಕಡಿಮೆಯಾಗಿದೆ. ಆದರೆ, ಚಿನ್ನಾಭರಣಗಳ ರಫ್ತು ಶೇ.8ರಷ್ಟು ಹೆಚ್ಚಾಗಿದ್ದು, 5074 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ರಫ್ತು ಮಾಡಲಾಗಿದೆ.

ಬೇಳೆಕಾಳುಗಳ ದರ ಇಳಿಸಲು ಸೂಚನೆ

ಕಳೆದೊಂದು ತಿಂಗಳಿಂದ ದೇಶದ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ತೊಗರಿ, ಉದ್ದು ಮತ್ತು ಕಡಲೆ ಬೇಳೆಯ ಬೆಲೆ ಶೇಕಡ 4ರಷ್ಟು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮಾರಾಟಗಾರರು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಭಾರತೀಯ ಸಣ್ಣ ವ್ಯಾಪಾರಿಗಳ ಒಕ್ಕೂಟದೊಂದಿಗೆ ಮಂಗಳವಾರ ಸಭೆ ನಡೆಸಿರುವ ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ, ಬೇಳೆಕಾಳುಗಳ ದಾಸ್ತಾನು ಬಗ್ಗೆ ಪರಿಶೀಲನೆ ನಡೆಸಿದರು. ಬೇಳೆಕಾಳುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ರಿಟೇಲ್ ಕೈಗಾರಿಕಾ ವಲಯ ಸಹಕಾರ ನೀಡಬೇಕಿದೆ ಎಂದು ನಿಧಿ ಸೂಚಿಸಿದರು. ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ದರ ಏರಿಸಿ ಲಾಭ ಪಡೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಚ್ಚರಿಕೆ ನೀಡಿದೆ.