ಬೆಂಗಳೂರು: ಅಧಿಕ ಬಡ್ಡಿ ಕೊಡುವುದಾಗಿ ವೃದ್ಧ ದಂಪತಿಯನ್ನು ನಂಬಿಸಿದ ಗೋಲ್ಡ್ ಲೋನ್ ಕಂಪನಿ, 35 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಂಚನೆಗೊಳಗಾದ ಮತ್ತಿಕೆರೆ ನಿವಾಸಿ ಪಣಿಕ್ಕರ್ ಎಂಬುವರು ಕೊಟ್ಟ ದೂರಿನ ಮೇರೆಗೆ ಪಾಪ್ಯುಲರ್ ಗ್ರೂಪ್ ಆ್ ಕಂಪನಿಯ ಮಾಲೀಕ ಥಾಮಸ್ ಡ್ಯಾನಿಯಲ್ ಮತ್ತು ಮ್ಯಾನೇಜರ್ ಕೋಶಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಣಿಕ್ಕರ್ ನಿವೃತ್ತಿಯಾಗಿದ್ದಾರೆ. 10 ವರ್ಷಗಳ ಹಿಂದೆ ಮತ್ತಿಕೆರೆಯಲ್ಲಿರುವ ಪಾಪ್ಯುಲರ್ ಗ್ರೂಪ್ ಆ್ ಕಂಪನಿಯ ಮ್ಯಾನೇಜರ್ ಕೋಶಿ ಎಂಬಾತನ ಪರಿಚಯವಾಗಿತ್ತು. ಕಂಪನಿಯಲ್ಲಿ ಒಡವೆಗಳನ್ನು ಅಡಮಾನವಾಗಿಟ್ಟುಕೊಂಡು, ಸಾಲದ ರೂಪದಲ್ಲಿ ಹಣ ಕೊಡುತ್ತೇವೆ. ಅಲ್ಲದೆ, ಹಣ ಹೂಡಿಕೆ ಮಾಡಿದರೆ ಶೇ. 12 ಬಡ್ಡಿ ನೀಡುವುದಾಗಿ ಹೇಳಿದ್ದರು.
ಆತನ ಮಾತನ್ನು ನಂಬಿದ ಪಣಿಕ್ಕರ್, ಅವರ ಹೆಸರಿನಲ್ಲಿ 20.53 ಲಕ್ಷ ರೂ. ಹಾಗೂ ಪತ್ನಿ ಸಾರಮ್ಮ ಪಣಿಕ್ಕರ್ ಹೆಸರಿನಲ್ಲಿ 14.74 ಲಕ್ಷ ರೂ. ಹೂಡಿಕೆ ಮಾಡಿದ್ದರು. ಹೂಡಿಕೆಯ ಹಣಕ್ಕೆ ಬಡ್ಡಿ ಕೇಳಿದಾಗ ಕಂಪನಿ ಮ್ಯಾನೇಜರ್ ಸಬೂಬು ಹೇಳಿದ್ದ. ಇತ್ತೀಚೆಗೆ ಏಕಾಎಕಿ ಕಂಪನಿಯ ಕಚೇರಿ ಬಂದ್ ಮಾಡಿ ನಾಪತ್ತೆಯಾಗಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಆರೋಪಿಸಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.