ಖನಿಜ ಭವನದ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ಏಕಗವಾಕ್ಷಿ ಸಮಿತಿ ಸಭೆ ಮಂಗಳವಾರ ನಡೆಯಿತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಿ.ರಮಣರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 
ನ್ಯೂಸ್

88 ಯೋಜನೆಗಳಿಗೆ ರಾಜ್ಯ ಸರ್ಕಾರ ಅಸ್ತು

Webdesk - Ravikanth

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಿರುವ ಔಷಧ, ಜವಳಿ, ಸ್ಟೀಲ್ ಉದ್ಯಮಗಳು ಒಳಗೊಂಡ ಒಟ್ಟು 88 ಯೋಜನೆಗಳಿಗೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಅಸ್ತು ಎಂದಿದ್ದು, 2,367.99 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ.

ಖನಿಜ ಭವನದ ‘ಉದ್ಯೋಗ ಮಿತ್ರ’ ಸಭಾಂಗಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ಮಂಗಳವಾರ ನಡೆಯಿತು. 50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ ಏಳು ಬೃಹತ್ ಮತ್ತು ಮಧ್ಯಮ ಯೋಜನೆಗಳಿಂದ ಒಟ್ಟು 799.1 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಅಂದಾಜು 3237 ಜನರಿಗೆ ಉದ್ಯೋಗ ಲಭಿಸಲಿವೆ.

15 ರಿಂದ 50 ಕೋಟಿ ರೂ. ಒಳಗಿನ 78 ಯೋಜನೆಗಳಿಗೆ ಅನುಮೋದಿಸಿದ್ದು, ಒಟ್ಟು 1431.74 ಕೋಟಿ ರೂ. ಹೂಡಿಕೆಯಾಗಲಿದೆ. ಅಲ್ಲದೆ, 7667 ಉದ್ಯೋಗಗಳು ಸೃಜನೆಯಾಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅಸ್ತು ಎಂದಿದ್ದು, 137.15 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಈಗಾಗಲೆ ವಿದೇಶಿ ನೇರ ಹೂಡಿಕೆಯಲ್ಲಿ (ಎಫ್ ಡಿಐ) ಕರ್ನಾಟಕ ಮೊದಲ ತ್ರೖೆಮಾಸಿಕ ಅವಧಿಯಲ್ಲಿ ಮೊದಲ ಸ್ಥಾನಕ್ಕೆ ಬಂದಿದ್ದು, ಬಂಡವಾಳ ಹೂಡಿಕೆಯಲ್ಲೂ ರಾಜ್ಯ ಅಗ್ರ ಸ್ಥಾನ ಪಡೆಯಲೆಂಬ ಉದ್ದೇಶದಿಂದ ಪ್ರಯತ್ನಗಳು ಸಾಗಿವೆ ಎಂದು ಇಲಾಖೆ ತಿಳಿಸಿದೆ.