ನ್ಯೂಸ್

ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

ನವದೆಹಲಿ: ಈಗಾಗಲೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ರೂಪಾಂತರಿ ಕರೊನಾ 'ಒಮಿಕ್ರಾನ್​' ಸಾಕಷ್ಟು ಆತಂಕವನ್ನು ಮೂಡಿಸಿದೆ. ಈ ನಡುವೆ ಒಮಿಕ್ರಾನ್​ ಅಷ್ಟೇನೂ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಅದು ಜಾಗತಿಕವಾಗಿ ಅಪಾಯಕಾರಿ ಎಂಬ ಮಾಹಿತಿಯೂ ಹೊರಹೊಮ್ಮಿದ್ದು, ಅದರೆಡೆಗಿನ ಆತಂಕ ಮತ್ತಷ್ಟು ಹೆಚ್ಚಾಗುವಂತಾಗಿದೆ.

ಇಂಥದ್ದೊಂದು ಅಭಿಪ್ರಾಯವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ವ್ಯಕ್ತಪಡಿಸಿದೆ. ಕೋವಿಡ್​ನ ಹೊಸ ರೂಪಾಂತರಿ ಒಮಿಕ್ರಾನ್​ ಅಧಿಕ ಮ್ಯುಟೇಷನ್​ ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನೂ ದಾಟಿ ವ್ಯಾಪಕವಾಗಿ ಹರಡಬಲ್ಲಂಥದ್ದು ಎಂಬುದು ತಿಳಿದುಬಂದಿದೆ. ಅದಾಗ್ಯೂ ಒಮಿಕ್ರಾನ್​ ಕುರಿತು ಖಚಿತ ಮಾಹಿತಿಗಳ ಕೊರತೆ ಇನ್ನೂ ಇರುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇನ್ನು ಈ ಹಿನ್ನೆಲೆಯಲ್ಲಿ ಕೋವಿಡ್-19 ಸೋಂಕು ಅತಿಯಾಗಿ ವ್ಯಾಪಿಸುವ ಸಾಧ್ಯತೆ ಇದ್ದು, ಸೋಂಕು ಕಾಣಿಸಿಕೊಂಡ ಪ್ರದೇಶಕ್ಕೆ ಅನುಗುಣವಾಗಿ ಅದರ ಪರಿಣಾಮಗಳು ಗಂಭೀರವಾಗಿರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ.