ಭುವನೇಶ್ವರ್: ಒಡಿಶಾ ರಾಜಧಾನಿ ಭುವನೇಶ್ವರದ ಹೋಟೆಲ್ ಒಂದರಲ್ಲಿ ಹುಡುಗಿಯೊಬ್ಬಳು ನಿಗೂಢವಾಗಿ ಮೃತಪಟ್ಟ ಪ್ರಕರಣದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ರಾಜ್ಯ ಮಹಿಳಾ ಆಯೋಗ ಸುಮೊಟೋ ಪ್ರಕರಣ ದಾಖಲಿಸಿಕೊಂಡಿದೆ.
ಮೃತ ಹುಡುಗಿಯನ್ನು ಸುಭಾಲಕ್ಷ್ಮೀ ಸಾಹು ಎಂದು ಗುರುತಿಸಲಾಗಿದೆ. ಈಕೆ ಅಪ್ರಾಪ್ತೆಯಾಗಿದ್ದು, ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹುಡುಗಿಯ ಮೃತದೇಹ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಸದ್ಯ ಮಹಿಳಾ ಆಯೋಗ ಸುಮೊಟೋ ಕೇಸು ದಾಖಲಿಸಿದ್ದು, ತನಿಖೆ ನಡೆಸಿ 15 ದಿನಗಳ ಒಳಗೆ ವರದಿ ಸಲ್ಲಿಕೆ ಮಾಡುವಂತೆ ಭುವನೇಶ್ವರದ ಡಿಸಿಪಿಗೆ ಆಯೋಗ ಸೂಚನೆ ನೀಡಿದೆ.
ಸುಭಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅಥವಾ ಇನ್ನಾವುದೋ ಕಾರಣದಿಂದ ಆಕೆ ಪ್ರಾಣ ಕಳೆದುಕೊಂಡಿದ್ದಾಳೆಯೇ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಭುವನೇಶ್ವರ ಡಿಸಿಪಿಗೆ ಪತ್ರ ಬರೆದಿದ್ದೇವೆ. ಈ ಸಂಬಂಧ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಡಿಸಿಪಿಗೆ ಸೂಚಿಸಿದ್ದೇವೆ ಎಂದು ಒಡಿಶಾ ಮಹಿಳಾ ಆಯೋಗದ ಅಧ್ಯಕ್ಷೆ ಮಿನಾತಿ ಬೆಹೆರಾ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಬೆತ್ತಲೆ ಎಂಎಂಎಸ್ ವಿಡಿಯೋ, ಆತ್ಮಹತ್ಯೆ ಹಿಂದಿನ ಕಾರಣ ಎಂದು ತಿಳಿದುಬಂದಿದೆ. ವಿಡಿಯೋ ವೈರಲ್ ಆದ ಕೆಲವೇ ಸಮಯಗಳಲ್ಲಿ ಸುಭಾಲಕ್ಷ್ಮೀ ಸಾಹು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 8 ರಿಂದ 12 ಮಂದಿಯನ್ನು ಕಮಿಷನರೇಟ್ ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮೃತ ಸುಭಾಲಕ್ಷ್ಮೀಯ ಕಾಲ್ ಡೀಟೆಲ್ಸ್ ರೆಕಾರ್ಡ್ (ಸಿಡಿಆರ್) ವಿಶ್ಲೇಷಣೆ ಮಾಡಿದ ಬಳಿಕ ಪೊಲೀಸರಿಗೆ ಈ ಪ್ರಕರಣದಲ್ಲಿ ಮಹತ್ವದ ಮಾಹಿತಿ ಸಿಕ್ಕಿದೆ.
ಕಮಲ ನೆಹರು ಕಾಲೇಜಿಗೆ ದಾಖಲಾದರೂ ಸುಭಾಲಕ್ಷ್ಮೀ ತರಗತಿಗೆ ಹಾಜರಾಗುತ್ತಿರಲಿಲ್ಲ. ಆಕೆ ಬಾರ್ ಗರ್ಲ್ ಆಗಿ ಅನೇಕ ಬಾರ್ಗಳಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ನಿಜವಾದ ವಯಸ್ಸು ಗೊತ್ತಾದ ಬಳಿಕ ಮ್ಯಾನೇಜರ್ಸ್ ಮತ್ತು ಬಾರ್ನ ಮಾಲೀಕರು ಆಕೆಗೆ ಕೆಲಸ ಕೊಡುತ್ತಿರಲಿಲ್ಲ. ನಂತರ ಕೆಲವರು ಇದರ ಲಾಭ ಪಡೆದು ಆಕೆಯನ್ನು ಕೆಲವು ಅಕ್ರಮಗಳಲ್ಲಿ ತೊಡಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಪ್ರಾಥಮಿಕ ತನಿಖೆಯ ಪ್ರಕಾರ, ಸುಭಾಲಕ್ಷ್ಮೀಯ ಮಾಜಿ ಬಾಯ್ಫ್ರೆಂಡ್ ಓರ್ವ ಆಕೆಯ ನಗ್ನ ಎಂಎಂಎಸ್ ವಿಡಿಯೋವನ್ನು ಶೂಟ್ ಮಾಡಿ ಅದನ್ನು ವೈರಲ್ ಮಾಡಿದ್ದಾನೆ ಎನ್ನಲಾಗಿದೆ. ವೈರಲ್ ಎಂಎಂಎಸ್ನಿಂದಾಗಿ ಸುಭಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಲಕ್ಷ್ಮೀಸಾಗರ ಏರಿಯಾದಲ್ಲಿ ಇರುವ ಹೋಟೆಲ್ಗೆ ಶುಕ್ರವಾರ ಬೆಳಗ್ಗೆ 3.20ಕ್ಕೆ ಸುಭಾಲಕ್ಷ್ಮೀ ಪ್ರವೇಶ ಪಡೆದಿದ್ದಳು. ಅದೇ ದಿನ ಆಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ರೂಮ್ ನಂಬರ್ 205ರಲ್ಲಿ ಪತ್ತೆಯಾಯಿತು. ಹೋಟೆಲ್ ಸಿಬ್ಬಂದಿ ಇದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)