More

    ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳ ಪತ್ರ ಬರೆದ ಪ್ರಕರಣ: ಸಿಐಡಿ ಅಧಿಕಾರಿಗಳಿಂದ ವಿಚಾರಣೆ

    ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲಂಚಕೆ ಬೇಡಿಕೆ ಇಟ್ಟಿದ್ದಾರೆಂದು ಸಹಾಯಕ ಕೃಷಿ ನಿರ್ದೇಶಕರು ಬರೆದಿದ್ದಾರೆನ್ನಲಾದ ಪತ್ರದ ತನಿಖೆ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ನಗರದಲ್ಲಿ ವಿಚಾರಣೆ ನಡೆಸಿದರು.
    ಸಿಐಡಿ ಐಜಿಪಿ ಪ್ರವೀಣ್‌ಮಧುಕರ್ ಪವಾರ್ ನೇತೃತ್ವದ ತಂಡಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಸ್ತಾಂತರ ಮಾಡಿದರು. ಬಳಿಕ ಸಿಐಡಿ ಅಧಿಕಾರಿಗಳ ತಂಡ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿ ಮಾಡಿ ಕೆಲವೊತ್ತು ಚರ್ಚೆ ನಡೆಸಿದರು.
    ಅಂಚೆ ಪೋಸ್ಟ್ ಕವರ್ ಮೇಲೆ ಇದ್ದ ಕೃಷಿ ಇಲಾಖೆಯ ರಮೇಶ್ ಎಂಬ ಹೆಸರು ಹಾಗೂ ನಮೂದಾಗಿರುವ ಮೊಬೈಲ್ ನಂಬರ್ ಬಗ್ಗೆ ವಿಚಾರಣೆ ನಡೆಸಿದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕುರುಹುಗಳು ದೊರಕಿಲ್ಲ ಎನ್ನಲಾಗಿದೆ. ಇನ್ನು ರಾಜ್ಯಪಾಲರಿಗೆ ಕಳುಹಿಸಿರುವ ದೂರಿಗೆ ಸಂಬಂಧಿಸಿದಂತೆ ಮೈಸೂರಿನ ಸ್ವರಸ್ವತಿಪುರಂ ಪ್ರಧಾನ ಅಂಚೆ ಕಚೇರಿಯಿಂದ ಫೋಸ್ಟ್ ಹೋಗಿದೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸಿಐಡಿ ತಂಡ ಮೈಸೂರಿನತ್ತ ತೆರಳಿದರು.
    ಮಂಗಳವಾರ ಜಿಲ್ಲಾ ಪೊಲೀಸರು ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಅಲ್ಲಿನ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದರು. ಆದರೆ ಯಾರ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಮಾಡಿ ರಾಜ್ಯಪಾಲರಿಗೆ ಜಿಲ್ಲೆಯ ಏಳು ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ದೂರು ಅರ್ಜಿ ನೀಡಿದ್ದಾರೆ ಎಂಬ ಪತ್ರ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts