ಚಿಕ್ಕಬಳ್ಳಾಪುರ: ಹೆಣ್ಣುಮಕ್ಕಳಿಗೆ ಅವಕಾಶ ಸಿಕ್ಕರೆ ಅವರು ಗಂಡುಮಕ್ಕಳನ್ನು ಮೀರಿ ಬೆಳೆಯುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಸತ್ಯಸಾಯಿ ಯುನಿವರ್ಸಿಟಿ ಆಫ್ ಹ್ಯೂಮನ್ ಎಕ್ಸಲೆನ್ಸ್ನ ಎರಡನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
"ಏ ಟ್ರೇಲರ್ ಹೈ, ಪಿಚ್ಚರ್ ಅಭಿ ಬಾಕಿ ಹೈ" ಎಂದು ಹೆಣ್ಣುಮಕ್ಕಳ ಸಾಧನೆಯ ಕುರಿತಂತೆ ಡೈಲಾಗ್ ಹೊಡೆದ ಅವರು, ಹೆಣ್ಣುಮಕ್ಕಳಿಗೆ ಅವಕಾಶ ಸಿಕ್ಕಿದರೆ ದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ಮಾತ್ರವಲ್ಲ, ಗಂಡುಮಕ್ಕಳನ್ನು ಮೀರಿ ಬೆಳೆಯುತ್ತಾರೆ ಎಂದು ಹೇಳಿದರು.
ನನಗೆ ಜಾರ್ಖಂಡ್ ಪ್ರಥಮ ರಾಜ್ಯಪಾಲೆ, ರಾಷ್ಟ್ರಪತಿ ಗರಿಮೆ ಸಿಕ್ಕಿದೆ. ಇವೆಲ್ಲವೂ ಮಹಿಳಾ ಸಾಧನೆಯ ನಿದರ್ಶನಗಳು. ಇವು ಕೇವಲ ಟ್ರೇಲರ್, ಇನ್ನೂ ಪಿಚ್ಚರ್ ಬಾಕಿ ಇದೆ ಎಂದ ಅವರು, ಭಾರತದ ಪರಂಪರೆ, ಇತಿಹಾಸದ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಕೈಗೊಂಡಿದ್ದ ಘಟಿಕೋತ್ಸವದಲ್ಲಿ ಅವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಗೌರವದ ಪುರಸ್ಕಾರವನ್ನೂ ಮಾಡಿದರು.