ಭೋಪಾಲ್/ನವದೆಹಲಿ: ಅತ್ಯಾಚಾರ ಸಂತ್ರಸ್ತೆ ಕಡೆಗಿನ ಸೂಕ್ಷ್ಮತೆಯನ್ನು ಮರೆತಂತಹ ಹಾಗೂ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಬುಡಕಟ್ಟು ಜನಾಂಗ ಪ್ರಾಬಲ್ಯವಿರುವ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಹುಡುಗಿಯನ್ನು ಆರೋಪಿಯ ಜತೆ ಹಗ್ಗದಿಂದ ಕಟ್ಟಿಹಾಕಿ ಮೆರವಣಿಗೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮನಕದಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದ್ದು, ಈ ರೀತಿ ಮಾಡಿದವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಡಿಯೋದಲ್ಲಿ ಸಂತ್ರಸ್ತ ಹುಡುಗಿಯನ್ನು ಹಗ್ಗದಲ್ಲಿ ಕಟ್ಟಿ ಆರೋಪಿ ಜತೆ ಮೆರವಣಿಗೆ ಕರೆದೊಯ್ಯುತ್ತಿದ್ದು, ಅವರ ಸುತ್ತ ಇರುವ ಕೆಲವು ವ್ಯಕ್ತಿಗಳು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಿದ್ದಾರೆ. ಇಬ್ಬರನ್ನು ಥಳಿಸಿದ ಬಳಿಕ ಮೆರವಣಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ರಾಜಧಾನಿ ಭೋಪಾಲ್ನಿಂದ 400 ಕಿ.ಮೀ ದೂರದಲ್ಲಿರುವ ಅಲಿರ್ಜ್ಪುರದಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಇದನ್ನೂ ಓದಿರಿ: ಬರ್ತ್ ಡೇ ಸಂಭ್ರಮದಲ್ಲಿದ್ದ ನಾಲ್ವರು ದುರಂತ ಸಾವು, ಕೇಕ್ ಕತ್ತರಿಸಿದ ದಿನವೇ ಅಟ್ಟಹಾಸ ಮೆರೆದ ಜವರಾಯ
ಅತ್ಯಾಚಾರ ಸಂತ್ರಸ್ತೆಯನ್ನು ಮುಜುಗರಕ್ಕೀಡು ಮಾಡಲು ಆರೋಪಿಯೊಂದಿಗೆ ನಡೆಯಲು ಒತ್ತಾಯಿಸಿದವರಲ್ಲಿ ಆಕೆಯ ಕುಟುಂಬದವರು ಸಹ ಸೇರಿದ್ದಾರೆಂದು ವರದಿಗಳು ತಿಳಿಸಿವೆ. ಇದು ಗಮನಕ್ಕೆ ಬಂದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಗಿಯನ್ನು ರಕ್ಷಿಸಿದರು.
ಸದ್ಯ ಘಟನಾ ಸಂಬಂಧ ಪ್ರಕರಣ ದಾಖಲಿಸಲಾಗಿದೆ. 21 ವರ್ಷದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಸಂತ್ರಸ್ತೆಯ ಕುಟುಂಬದ ಸದಸ್ಯರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)