ನ್ಯೂಸ್

ಅಣ್ಣ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ, ತುಂಬಾ ನೊಂದಿರುವೆ... ಎಂದ ಗರ್ಭಿಣಿ ಬಾಲಕಿ ಸಾವಿನ ಕದ ತಟ್ಟಿದಳು

ಶಿವಮೊಗ್ಗ: ''ರಾಘು ಅಣ್ಣ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ. ಈ ವಿಷಯವನ್ನು ನಿಮ್ಮ ಬಳಿ ಹೇಳಲಾಗದೆ ಮನನೊಂದಿರುವೆ. ಕ್ಷಮಿಸಿ...'' ಇದು ಎಂದು ಡೆತ್​ನೋಟ್​ ಬರೆದಿಟ್ಟ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದಾಳೆ.

ಹೊಸನಗರ ತಾಲೂಕಿನ ಗ್ರಾಮವೊಂದರಲ್ಲಿ ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ತೀವ್ರ ಮನನೊಂದಿದ್ದಳು. ಗರ್ಭಿಣಿ ಆಗಿರುವ ವಿಷಯ ಗೊತ್ತಾಗುತ್ತಿದ್ದಂತೆ ತಂದೆ-ತಾಯಿಗೆ ವಿಷಯ ತಿಳಿಸಲಾಗದೆ ಬುಧವಾರ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಪ್ಪ-ಅಮ್ಮ ಇಬ್ಬರೂ ಬುಧವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ಅವರು ಬರುವಷ್ಟರಲ್ಲಿ ಮಗಳು ಮನೆಯ ಪಕಾಶಿಗೆ ನೇಣು ಬಿಗಿದುಕೊಂಡು ಹೆಣವಾಗಿದ್ದಳು. ಬಾಲಕಿ ತಂದೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಬಾಲಕಿಯ ದೊಡ್ಡಮನ ಮಗ ತೀರ್ಥಹಳ್ಳಿ ತಾಲೂಕು ಕಗ್ಗಲಿ ಶಂಕರಾಪುರದ ರಾಘು ಯಾನೆ ರಾಘವೇಂದ್ರ(24) ಅತ್ಯಾಚಾರ ಆರೋಪಿ. ಸ್ಥಳ ಮಹಜರ್ ನಡೆಸಿದ ಹೊಸನಗರ ಸಿಪಿಐ ಮಧುಸೂದನ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.