ನ್ಯೂಸ್

ಸ್ಕೂಟಿ ಜತೆಗೆ ಫ್ಲೈಓವರ್​ ಪಿಲ್ಲರ್​ ಮೇಲೆ ಲ್ಯಾಂಡಿಂಗ್​; ಅದೃಷ್ಟವಶಾತ್​ ಹುಡುಗಿ ಪಾರಾಗಿದ್ದೇಗೆ ಗೊತ್ತಾ?

ಲಖನೌ: ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಹುಡುಗಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್​ ಸಮೇತ ಫ್ಲೈಓವರ್​ ಪಿಲ್ಲರ್​ ಮೇಲೆ ಬಿದ್ದಿದ್ದಾಳೆ. ಸ್ಕೂಟರ್ ಪಿಲ್ಲರ್‌ಗೆ ಸಿಲುಕಿದ್ದರಿಂದ ಬಾಲಕಿಯ ಪ್ರಾಣ ಉಳಿದಿದೆ. ಆದರೆ ಆಕೆಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಆ ಹುಡುಗಿಯನ್ನು ಸೇಫಾಗಿ ಕೆಳಗಿಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಇಡೀ ಘಟನೆಯು ನಿಥಾರಿ ಪ್ರದೇಶದ ಬಳಿಯ ಸೆಕ್ಟರ್-31ರ ಮುಂಭಾಗದ ಎಲಿವೇಟೆಡ್ ರಸ್ತೆಯಲ್ಲಿ ನಡೆದಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಬಾಲಕಿ ಸ್ಕೂಟರ್ ಸಮೇತ ಪಿಲ್ಲರ್ ಮೇಲೆ ಬಿದ್ದಿದ್ದಾಳೆ. ಅಪಘಾತದ ಬಳಿಕ ಸ್ಥಳದಲ್ಲಿ ಜನಸಾಗರವೇ ಜಮಾಯಿಸಿದೆ. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಡುಗಿ ಪಿಲ್ಲರ್​ ಮೇಲೆ ಬೀಳುತ್ತಿದ್ದಂತೆ ಆಕೆಯನ್ನು ರಕ್ಷಿಸಲು ಇಬ್ಬರು ಹುಡುಗರು ಪಿಲ್ಲರ್​ಗೆ ಇಳಿದಿದ್ದಾರೆ.

ಎಲಿವೇಟೆಡ್ ರಸ್ತೆಯಿಂದ ಬಿದ್ದು ಪಿಲ್ಲರ್‌ಗೆ ಸಿಲುಕಿಕೊಂಡಿರುವ ಮಾಹಿತಿ ಪಡೆದ ಪೊಲೀಸರ ತಂಡ ಮತ್ತು ಅಗ್ನಿಶಾಮಕ ದಳದ ತಂಡ ಹುಡುಗಿಯನ್ನು ರಕ್ಷಿಸಲು ಪ್ರಾರಂಭಿಸಿದೆ. ಕಠಿಣ ಪರಿಶ್ರಮದ ನಂತರ ಹುಡುಗಿಯನ್ನು ಉಳಿಸಲಾಗಿದೆ. ವಿಡಿಯೋದಲ್ಲಿ ಕ್ರೇನ್​​ ಬಳಸಿ ಹುಡುಗಿಯನ್ನು ರಕ್ಷಿಸಿರುವುದನ್ನು ಕಾಣಬಹುದಾಗಿದೆ. ಆಕೆಯನ್ನು ರಕ್ಷಿಸಲು ಇಳಿದಿದ್ದ ಹುಡುಗರನ್ನು ಸೇಫಾಗಿ ಕೆಳಗಿಳಿಸಲಾಗಿದೆ.

ಹುಡುಗಿ ನೋಯ್ಡಾದಿಂದ ಗಾಜಿಯಾಬಾದ್‌ಗೆ ಹೋಗುತ್ತಿದ್ದಾಗ ಆಕೆಯ ಸ್ಕೂಟರ್ ಅಪಘಾತಕ್ಕೀಡಾಯಿತು. ಬಳಿಕ ಆಕೆ ರಸ್ತೆಯ ಪಿಲ್ಲರ್​ಗೆ ಬಿದ್ದಿದ್ದಾಳೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಅದೃಷ್ಟವಶಾತ್ ಬಾಲಕಿ ಪಿಲ್ಲರ್‌ನಿಂದ ಕೆಳಗೆ ಬೀಳದ ಕಾರಣ ಭಾರೀ ಅನಾಹುತ ತಪ್ಪಿದೆ.ಪೊಲೀಸರು ಮತ್ತು ಅಗ್ನಿಶಾಮಕ ರಕ್ಷಣಾ ತಂಡ ಇಲ್ಲಿಗೆ ಆಗಮಿಸಿ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಡಿಸಿಪಿ ಮನೀಶ್ ಕುಮಾರ್ ಮಿಶ್ರಾ ತಿಳಿಸಿದರು. ಅಪಘಾತದ ಕಾರಣದ ಬಗ್ಗೆ ತನಿಖೆಗಳು ನಡೆಯುತ್ತಿವೆ ಮತ್ತು ವಾಹನವನ್ನು ಗುರುತಿಸಲು ಸಹಾಯ ಮಾಡುವ ಮಾಹಿತಿಗಾಗಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)