ನ್ಯೂಸ್

ನಡು ರಸ್ತೆಯಲ್ಲೇ ಬೈಕ್ ಮೇಲೆ ನಿಂತು ಗನ್‍ ಬೀಸಿದ ಲೇಡಿ ಗ್ಯಾಂಗ್‍ಸ್ಟರ್!

ಪಾಟನಾ: ದಿಘಾ-ಗೈಘಾಟ್ ಜೆಪಿ ಗಂಗಾ ಪಾತ್‍ವೇನಲ್ಲಿ ಥ್ರಿಲ್‍ಗಾಗಿ ಸಾಹಸಮಯ ಸ್ಟಂಟ್‍ಗಳನ್ನು ಮಾಡಲು ಇಲ್ಲೊಬ್ಬ ಯುವತಿ, ಗನ್‍ ಹಿಡಿದುಕೊಂಡು ಓಡಾಡಿದ್ದಾಳೆ. ಪ್ರಸ್ತುತ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಧಿಕಾರಿಗಳಿಗೆ ಚಿಂತೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಬೈಕ್‍ನ ಹಿಂಬದಿ ಕುಳಿತುಕೊಂಡಿದ್ದ ಹುಡುಗಿಯೊಬ್ಬಳು ಎರಡೂ ಕೈಗಳಲ್ಲಿ ಬಂದೂಕುಗಳನ್ನು ಹಿಡಿದಿರುವುದು ಕಾಣಬಹುದು.

ಮುಂಬೈನ 'ಮರೀನ್ ಡ್ರೈವ್'ಗೆ ಸಮನೆಂದು ಕರೆಯಲ್ಪಡುವ ಪಾಟನಾದ ಪ್ರಸಿದ್ಧ ಜೆಪಿ ಗಂಗಾ ಪಾತ್‍ವೇಯಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಯುವಕನೊಬ್ಬ ಬೈಕ್ ಸವಾರಿ ಮಾಡುತ್ತಿದ್ದು ಆತನ ಹಿಂಬದಿ ಹುಡುಗಿಯೊಬ್ಬಳು ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಮರೀನ್ ಡ್ರೈವ್ ಉದ್ದಕ್ಕೂ ಬೈಕ್ ವೇಗವಾಗಿ ತೆರಳುತ್ತಿರುವಾಗ ಆಕೆ ಎರಡೂ ಕೈಗಳಲ್ಲಿ ಗನ್‍ ಹಿಡಿದಿರುವುದನ್ನು ಕಾಣಬಹುದು.

ಟಾಪ್ ಮತ್ತು ಶಾರ್ಟ್ಸ್ ಧರಿಸಿದ ಹುಡುಗಿ, ಚಲಿಸುವ ಬೈಕಿನ ಮೇಲೆ ನಿಂತು, ಗಾಳಿಯಲ್ಲಿ ಗನ್ಸ್ ಬೀಸುತ್ತಾ ಪ್ರದರ್ಶನ ಮಾಡುತ್ತಿರುವುದನ್ನು ಕಾಣಬಹುದು. ಇಬ್ಬರ ಪಕ್ಕದಲ್ಲಿ ಸವಾರಿ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ ಎಂದು ತೋರುತ್ತದೆ. ಈ ಸ್ಟಂಟ್, ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಪ್ರಸ್ತುತ ವಿಡಿಯೋವನ್ನು ತನಿಖೆ ಮಾಡಲಾಗುತ್ತಿದೆ.

ಪಾಟನಾದ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಶರ್ಮಾ ಅವರು ವಿಡಿಯೋವನ್ನು ತಕ್ಷಣ ಗಮನಿಸಿದ್ದು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿದ್ದು ಶೀಘ್ರದಲ್ಲೇ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ವೈಭವ್ ಶರ್ಮಾ ಸುದ್ದಿಗಾರರಿಗೆ ಹೇಳಿದರು.(ಏಜೆನ್ಸೀಸ್)