ನ್ಯೂಸ್

ಎಕ್ಸ್ಪೈರಿ ಡೇಟ್ ಮುಗಿದ ಚಾಕೋಲೆಟ್​ ಸೇವನೆ; ರಕ್ತ ವಾಂತಿ ಮಾಡಿಕೊಂಡ ಬಾಲಕಿ ಆಸ್ಪತ್ರೆ ಪಾಲು!

ಮೋಹನ್​ ಶೆಟ್ಟಿ

ಪಂಜಾಬ್: ಒಂದೂವರೆ ವರ್ಷದ ಬಾಲಕಿಯೊಬ್ಬಳು ಕಿರಾಣಿ ಅಂಗಡಿಯಿಂದ ಖರೀದಿಸಿದ ಚಾಕಲೇಟ್ ತಿಂದಿದ್ದು, ಬಳಿಕ ತೀವ್ರ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ವರದಿಯಾಗಿದೆ.

ಹುಡುಗಿಯ ಸಂಬಂಧಿಕರೊಬ್ಬರು ನೀಡಿದ ಹೇಳಿಕೆಯ ಪ್ರಕಾರ, ಬಾಲಕಿ ಪಟಿಯಾಲಾದಲ್ಲಿರುವ ತನ್ನ ಕುಟುಂಬಸ್ಥರ ಮನೆಗೆ ಭೇಟಿ ನೀಡಿದಾಗ ಆಕೆಯ ಸಂಬಂಧಿಕರು ಅವಳಿಗೆ ತಿಂಡಿಗಳ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಗ ಅದರೊಳಗೆ ಚಾಕೊಲೇಟ್‌ ಇರುವುದು ಕಂಡುಬಂದಿದೆ. ಅದನ್ನು ತಿಂದ ಕೆಲವು ನಿಮಿಷಗಳಲ್ಲೇ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು, ಹೆಚ್ಚಿನ ಮಾಹಿತಿ ಪಡೆಯಲು ವೈದ್ಯರನ್ನು ಸಂಪರ್ಕಿಸಿದ್ದಾರೆ. ಆಗ ಬಾಲಕಿ ಅವಧಿ ಮೀರಿದ ಚಾಕೊಲೇಟ್ ತಿಂದ ಕಾರಣ ಅಸ್ವಸ್ಥಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಘಟನೆಯ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಸ್ನ್ಯಾಕ್ ಬಾಕ್ಸ್ ಖರೀದಿಸಿದ ಅಂಗಡಿಯನ್ನು ತಲುಪಿದ ಪೊಲೀಸರು ಮತ್ತು ಆರೋಗ್ಯ ಇಲಾಖೆಯು ಅಂಗಡಿಯಲ್ಲಿ ಅವಧಿ ಮೀರಿದ ತಿನಿಸುಗಳನ್ನು ಮಾರಾಟ ಮಾಡಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ತದನಂತರ ಅಂಗಡಿಯಿಂದ ಎಕ್ಸ್ಪೈರಿ ಡೇಟ್ ಮೀರಿದ ಇತರೆ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ,(ಏಜೆನ್ಸೀಸ್).