ನ್ಯೂಸ್

ಕಂದಮ್ಮನ ಗಂಟಲಲ್ಲಿ ಬೀಜವಿದೆ ಚಿಕಿತ್ಸೆ ಕೊಡಿ ಎಂದು ಗೋಗರೆದರೂ ಚಿಕಿತ್ಸೆ ಕೊಡದ ಆಸ್ಪತ್ರೆ! ಕರೊನಾ ರಿಪೋರ್ಟ್​ನಿಂದಾಗಿ ಮಗಳ ಪ್ರಾಣವೇ ಬಲಿ!

ಪಟನಾ: ಕರೊನಾ ಬಂದಾಗಿನಿಂದ ಬೇರೆ ಕಾಯಿಲೆಗಳ ಚಿಕಿತ್ಸೆಯೂ ಕಷ್ಟಸಾಧ್ಯವಾಗಿಬಿಟ್ಟಿದೆ. ಅದೇ ರೀತಿ ತನ್ನ ಎಂಟು ವರ್ಷದ ಮಗಳ ಗಂಟಲಲ್ಲಿ ಲಿಚ್ಚಿ ಹಣ್ಣು ಸಿಕ್ಕಿಹಾಕಿಕೊಂಡಿದೆ ಎಂದು ಆಸ್ಪತ್ರೆಗೆ ಕರೆದುಕೊಂಡ ಹೋದ ತಂದೆಗೆ ಆಸ್ಪತ್ರೆ ಕರೊನಾ ರಿಪೋರ್ಟ್​ ತರಲು ಹೇಳಿದ್ದು, ಬಾಲಕಿ ತಂದೆಯ ತೋಳಿನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ.

ಮುಸಾಹಾರಿ ಬ್ಲಾಕ್‌ನಲ್ಲಿರುವ ರಘುನಾಥಪುರದ ನಿವಾಸಿ ಸಂಜಯ್​ ರಾಮ್​ನ ಎಂಟು ವರ್ಷದ ಮಗಳು ಜೂನ್​ 1ರಂದು ಮನೆಯಲ್ಲಿ ಲಿಚ್ಚಿ ಹಣ್ಣು ತಿನ್ನುತ್ತಾ ಕುಳಿತಿದ್ದಾಗ ಆಕಸ್ಮಿಕವಾಗಿ ಅದರ ಬೀಜವನ್ನೂ ನುಂಗಿಬಿಟ್ಟಿದ್ದಾಳೆ. ಗಂಟಲಲ್ಲಿ ಬೀಜ ಸಿಕ್ಕಿಹಾಕಿಕೊಂಡು ಒದ್ದಾಡಲಾರಂಭಿಸಿದ್ದಾಳೆ. ತಕ್ಷಣ ಸಂಜಯ್​ ಮಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ಹತ್ತಿರವಿದ್ದ ಸದಾರ್​ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ನನ್ನ ಮಗಳಿಗೆ ಚಿಕಿತ್ಸೆ ಕೊಡಿ ಎಂದು ವೈದ್ಯರಲ್ಲಿ ಬೇಡಿಕೊಂಡಿದ್ದಾನೆ.

ಆದರೆ ಯಾವುದೇ ಚಿಕಿತ್ಸೆ ಕೊಡುವುದಕ್ಕೂ ಮುನ್ನ ರೋಗಿಯ ಕರೊನಾ ವರದಿ ನೀಡುವುದು ಅವಶ್ಯಕ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಕರೊನಾ ಟೆಸ್ಟ್​, ಅದರ ರಿಪೋರ್ಟ್​ ಎಂದು ನಾಲ್ಕು ಗಂಟೆಗಳ ಕಾಲ ಆತನನ್ನು ಕಾಯಿಸಲಾಗಿದೆ. ಅಷ್ಟರಲ್ಲಾಗಲೇ ಸಾಕಷ್ಟು ಒದ್ದಾಡಿದ್ದ ಬಾಲಕಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.

ಪ್ರಾಣ ಬಿಟ್ಟ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿದ್ದ ಸಂಜಯ್​ ಆಸ್ಪತ್ರೆಯ ಎದುರೇ ಜೋರಾಗಿ ಅಳಲಾರಂಭಿಸಿದ್ದಾನೆ. ಅದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದಾದ ನಂತರ ಎಚ್ಚೆತ್ತುಕೊಂಡು ವೈದ್ಯಾಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವುದಾಗಿಯೂ ಅವರು ಹೇಳಿದ್ದಾರೆ. (ಏಜೆನ್ಸೀಸ್)