ನ್ಯೂಸ್

ಅಮ್ಮಾ ಕ್ಷಮಿಸಿಬಿಡು, ಅವನೂ ನನ್ನ ಮದ್ವೆ ಆಗಲ್ಲ, ಬೇರೆಯವರನ್ನೂ ಆಗಲು ಬಿಡಲ್ಲ...

suchetana

ತೆಲಂಗಾಣ: ‘ಅಮ್ಮಾ ನನ್ನನ್ನು ಕ್ಷಮಿಸಿಬಿಡು, ನನಗೀಗ ಬೇರೆ ದಾರಿಯೇ ಕಾಣುತ್ತಿಲ್ಲ. ರಂಜಿತ್‌ನನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಅವನು ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇಷ್ಟೇ ಅಲ್ಲ. ನೀನು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ, ಮದುವೆಯಾದರೆ ಅಷ್ಟೇ ಕಥೆ... ಎಂದು ಬೆದರಿಕೆಯನ್ನೂ ಹಾಕಿದ್ದಾನೆ. ನಾನು ಅವನನ್ನೂ ಮದುವೆಯಾಗುವಂತೆ ಇಲ್ಲ, ಬೇರೆಯವರ ಜತೆಯೂ ಸಂಸಾರ ಮಾಡಲು ಅವನು ಬಿಡುವುದಿಲ್ಲ. ನನ್ನ ಬಳಿ ಸಾಯುವುದು ಬಿಟ್ಟರೆ ಬೇರೆ ಯಾವುದೇ ದಾರಿ ಇಲ್ಲ... ನಿಮ್ಮನ್ನೆಲ್ಲಾ ತುಂಬಾ ಮಿಸ್‌ ಮಾಡ್ಕೋತೀನಿ ಅಮ್ಮಾ...

- ಹೀಗೆಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ ತೆಲಂಗಾಣದ ಪೋಥರಂ ಗ್ರಾಮದ 19 ವರ್ಷದ ಯುವತಿ ಉಮಾ.

“ನಾನು ಬದುಕಿ ನಿಮಗೆ ನೋವು ಕೊಡಲು ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಆ ಪತ್ರದಲ್ಲಿ ಬರೆದಿಟ್ಟಿದ್ದಾಳೆ.

ಉಮಾ ಇಲ್ಲಿಯ ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದ ರಂಜಿತ್ ಎಂಬ ಯುವಕನ ಪ್ರೇಮಕ್ಕೆ ಬಿದ್ದಿದ್ದಾಳೆ. ಆತನೂ ಇವಳನ್ನು ಪ್ರೀತಿಸುವುದಾಗಿ ಹೇಳಿದ್ದು, ಅದನ್ನು ಉಮಾ ನಂಬಿದ್ದಾಳೆ.

ಈ ಬಗ್ಗೆ ಅರಿವು ಇಲ್ಲದಿದ್ದ ಉಮಾ ಪಾಲಕರು ಮಗಳಿಗೆ ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಮನೆಯವರಿಗೆ ತನ್ನ ಪ್ರೀತಿಯ ವಿಷಯ ತಿಳಿಸಲು ಹೆದರಿದ ಉಮಾ ನಂತರ ರಂಜಿತ್‌ ಬಳಿ ಈ ವಿಷಯ ತಿಳಿಸಿದ್ದಾಳೆ. ಮದುವೆ ಮಾಡಲು ಮನೆಯಲ್ಲಿ ಹುಡುಗನನ್ನು ನೋಡುತ್ತಿದ್ದಾರೆ. ನೀನು ನನ್ನ ಮದುವೆ ಆಗು. ಇಲ್ಲವಾದರೆ ಬೇರೊಬ್ಬನ ಜೊತೆ ಮದುವೆ ಮಾಡಿಸುತ್ತಾರೆ ಎಂದಿದ್ದಾಳೆ.

ಆದರೆ ಆತ ಮಾತ್ರ ಅದನ್ನು ನಯವಾಗಿ ತಿರಸ್ಕರಿಸಿಬಿಟ್ಟಿದ್ದಾನೆ! ನಾನೂ ಮದುವೆಯಾಗುವುದಿಲ್ಲ, ಆ ಉದ್ದೇಶವೇ ನನಗಿಲ್ಲ. ಹಾಗೆಂದು ನೀನು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ ಎಂದಿದ್ದಾನೆ.

ಇದರಿಂದ ಉಮಾ ತುಂಬಾ ನೊಂದುಕೊಂಡಳು. ಅಪ್ಪ-ಅಮ್ಮನ ಬಳಿ ವಿಷಯವನ್ನು ಪ್ರಸ್ತಾಪಿಸುವುದು ಒಳ್ಳೆಯದು ಎಂದುಕೊಂಡ ಆಕೆ ತನ್ನ ಪ್ರೀತಿಯ ವಿಚಾರ ಹೇಳಿದ್ದಾಳೆ. ಮಗಳು ಹೇಗೋ ಪ್ರೀತಿಗೆ ಸಿಲುಕಿದ್ದಾಳೆ, ಅವಳು ಇಷ್ಟಪಟ್ಟವರ ಜತೆಗೇ ಮದುವೆ ಮಾಡೋಣ ಎಂದುಕೊಂಡ ಪಾಲಕರು ಈ ಕುರಿತು ರಂಜಿತ್ ಜತೆಯೇ ಮಾತನಾಡಿದ್ದಾರೆ. ಆದರೆ ಆತ ಮಾತ್ರ ಮದುವೆಗೆ ಒಪ್ಪಲಿಲ್ಲ!

ಇದರಿಂದ ನೊಂದ ಉಮಾ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ. ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ರಂಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.