ಸಂಡೂರು: ಶಿವದಾಸ್ ಘೋಷ್ ಎಂಬ ಹೆಸರು ಶೋಷಿತ, ನೊಂದವರ ಮನಸ್ಸಿನಾಳದಲ್ಲಿ ಪ್ರತಿಧ್ವನಿಸುವ ವೈಚಾರಿಕ ಶಕ್ತಿ ಎಂದು ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಎಂ.ದೇವದಾಸ್ ಹೇಳಿದರು.
ಪಟ್ಟಣದಲ್ಲಿ ಎಸ್‌ಯುಸಿಐ(ಕಮ್ಯುನಿಸ್ಟ್)ಪಕ್ಷ ಭಾನುವಾರ ಏರ್ಪಡಿಸಿದ್ದ ಮಾರ್ಕ್ಸ್‌ವಾದಿ ಶಿವದಾಸ್ ಘೋಷ್ ಜನ್ಮ ಶತಮಾನೋತ್ಸವ ಸಭೆಯಲ್ಲಿ ಮಾತನಾಡಿದರು. ಘೋಷ್ ಅವರು ಭಾರತಕ್ಕೆ ಉತ್ಕೃಷ್ಟವಾದ ಚಿಂತನೆಗಳನ್ನು ನೀಡಿದ್ದಾರೆ. ಅವುಗಳ ಮೂಲಕವೇ ಬೆಲೆ ಏರಿಕೆ, ಅಸಮಾನತೆ, ನಿರುದ್ಯೋಗ, ಬಡತನ, ಹಸಿವು ಮುಂತಾದ ಅನೇಕ ಸಮಸ್ಯೆಗಳಿಗೆ ಒಂದು ವೈಜ್ಞಾನಿಕ ಪರಿಹಾರ ನೀಡಬಹುದಾಗಿದೆ. ಅವರ ಚಿಂತನೆಗಳ ಬಲದಿಂದಲೇ ಇಂದಿನ ಭ್ರಷ್ಟ ಹಾಗೂ ಶೋಷಿತ ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗಾಣಿಸಬಹುದು ಎಂದರು.
ಜಿಲ್ಲಾ ಸಮಿತಿ ಸದಸ್ಯ ಸೋಮಶೇಖರ ಗೌಡ ಮಾತನಾಡಿ, ಆರ್ಥಿಕ, ಸಾಮಾಜಿಕವಾಗಿ ಎಲ್ಲ ರೀತಿಯ ಅಸಮಾನತೆಗಳು ತೊಲಗಬೇಕಾದರೆ, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಆಗಬೇಕೆಂಬ ನೆರವೇರಬೇಕು ಎಂಬ ಸತ್ಯವನ್ನು ಘೋಷ್ ಮನಗಂಡಿದ್ದರು. 1948ರ ಏ.24ರಂದು ಶಿವದಾಸ್ ಘೋಷ್ ಬೆರಳೆಣಿಕೆಯ ಸಹಯೋಧರೊಂದಿಗೆ ಸೇರಿ ಎಸ್‌ಯುಸಿಐ ಸ್ಥಾಪಿಸಿದರು ಎಂದು ತಿಳಿಸಿದರು.
ಜಿಲ್ಲಾ ಸಮಿತಿ ಸದಸ್ಯ ಡಾ.ಪ್ರಮೋದ್.ಎನ್ ಮಾತನಾಡಿ, ಕೋವಿಡ್ ಸಂದರ್ಭದಲ್ಲೂ ಅಂಬಾನಿ, ಅದಾನಿ ಸೇರಿದಂತೆ ಬೆರಳೆಣಿಕೆಯ ಮಾಲೀಕರು ನೂರಾರು ಪಟ್ಟು ಆಸ್ತಿ ಹೆಚ್ಚಿಸಿಕೊಂಡಿದ್ದಾರೆ. ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಕಾರ್ಪೋರೇಟ್ ಮಾಲೀಕರ ಕೈಗೊಂಬೆಗಳಾಗಿ, ಅವರ ಸಾಲ ತೆರಿಗೆಗಳನ್ನು ಮನ್ನಾ ಮಾಡುತ್ತಾ ಅವರನ್ನು ಮತ್ತಷ್ಟು ಕೊಬ್ಬಿಸಿವೆ ಎಂದರು.