Ghaati Release: ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಘಾಟಿ’ ಚಿತ್ರದ ರಿಲೀಸ್ ಕುರಿತು ನಟಿಯ ಅಭಿಮಾನಿಗಳು ಮತ್ತು ಸಿನಿಪ್ರಿಯರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಕ್ರಿಶ್ ನಿರ್ದೇಶನದ ಹಾಗೂ ಅನುಷ್ಕಾ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸೇರಿದಂತೆ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾ ತೆರೆಗೆ ಅಪ್ಪಳಿಸುವುದು ಮಾತ್ರ ಬಾಕಿ ಉಳಿದಿದೆ. ಕಳೆದ ಕೆಲವು ದಿನಗಳಿಂದ ರಿಲೀಸ್ ದಿನಾಂಕ ಮುಂದೂಡಿಕೆಯಾಗಿ, ಚಿತ್ರ ಯಾವಾಗ ತೆರೆಕಾಣಲಿದೆ ಎಂಬುದೇ ಪ್ರಶ್ನೆಯಾಗಿತ್ತು. ಕಡೆಗೂ ಅದಕ್ಕೆ ಉತ್ತರ ಸಿಕ್ಕಿದೆ.
ಈ ಹಿಂದೆ ನಿಗದಿಪಡಿಸಿದ್ದ ಏ.18ರಂದು 'ಘಾಟಿ' ಬಹುತೇಕ ಚಿತ್ರಮಂದಿಗರಳಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೆ, ಒಂದಷ್ಟು ಗೊಂದಲಗಳಿಂದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿತ್ತು. ಎರಡು ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಖಡಕ್ ಪಾತ್ರದ ಮೂಲಕ ಕಮ್ಬ್ಯಾಕ್ ಮಾಡಿರುವ ಅನುಷ್ಕಾರನ್ನು 'ಘಾಟಿ'ಯಾಗಿ ನೋಡಲು ಅವರ ಅಭಿಮಾನಿ ಬಳಗ ತೀವ್ರ ಕುತೂಹಲದಿಂದ ಕಾಯುತ್ತಿದೆ. ಚಿತ್ರತಂಡದಲ್ಲಿದ್ದ ಆಂತರಿಕ ಗೊಂದಲಗಳು ಇದೀಗ ಬಗೆಹರಿದಿದ್ದು, ಅಧಿಕೃತ ರಿಲೀಸ್ ದಿನಾಂಕ ಹೊರಬಿದ್ದಿದೆ.
ಜಾಗತಿಕವಾಗಿ ಇದೇ ಜುಲೈ 11ರಂದು ಬಹುತೇಕ ಚಿತ್ರಮಂದಿರಗಳಲ್ಲಿ 'ಘಾಟಿ' ತೆರೆಕಾಣಲಿದೆ. ಏಕಕಾಲಕ್ಕೆ ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಮಲಯಾಳಂನಲ್ಲಿ 'ದಿ ವೈಲ್ಡ್ ಸೋರ್ಸರರ್' ಸೇರಿದಂತೆ ಇನ್ನೂ ನಾಲ್ಕೈದು ಚಿತ್ರಗಳಲ್ಲಿ ಅನುಷ್ಕಾ ನಟಿಸುತ್ತಿದ್ದು, ಈ ಕುರಿತು ಯಾವ ಮಾಹಿತಿಯನ್ನೂ ತಮ್ಮ ಅಭಿಮಾನಿಗಳಿಗೆ ಬಿಟ್ಟುಕೊಟ್ಟಿಲ್ಲ,(ಏಜೆನ್ಸೀಸ್).