ನ್ಯೂಸ್

ಮರ್ಯಾದೆ, ಸೌಜನ್ಯ ಮೀರಿದವನಿಗೆ ಏನಾಗುತ್ತೆ...

kumarvrl

ಯುಂಜನ್ನೇವಂ ಸದಾತ್ಮಾನಂ ಯೋಗೀ ನಿಯತಮಾನಸಃ |

ಶಾನ್ತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ || 6.15

ಹೀಗೆ ಮನಸ್ಸನ್ನು ನಿಗ್ರಹಿಸಿದ ಯೋಗಿಯು ತನ್ನನ್ನು ಹೀಗೆ ಯಾವಾಗಲೂ ಯೋಗದಲ್ಲಿಟ್ಟುಕೊಳ್ಳುತ್ತಾ, ನಿರ್ವಾಣಪರವಾದ ನನ್ನಲ್ಲಿರುವ ಶಾಂತಿಯನ್ನು ಹೊಂದುತ್ತಾನೆ. ಇದೇ ಶಾಂತಿ ಮುಂದುವರಿದರೆ ಅದು ಮೋಕ್ಷದಲ್ಲಿ ಕೊನೆಗಾಣುವುದು. ಪರಮಾತ್ಮನಲ್ಲಿ ನೆಲೆ ನಿಲ್ಲುವುದೇ ಮೋಕ್ಷ. ಇಲ್ಲಿ ಮನಸ್ಸು ಭಗವಂತನಲ್ಲಿ ಕರಗುವುದು. ಇಂಥವನು ಪರಮಾತ್ಮನಲ್ಲಿ ಐಕ್ಯನಾಗುವನು.

ಶ್ರೀರಾಮಕೃಷ್ಣ ಪರಮಹಂಸರು ಮುಂದಿನ ಎರಡು ದೃಷ್ಟಾಂತಗಳನ್ನು ಕೊಟ್ಟಿದ್ದಾರೆ. ಹಲ್ಲುನೋವಿರುವಾಗ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರೂ ಮನಸ್ಸಿನ ಒಂದು ಭಾಗ ಹಲ್ಲುನೋವಿನ ಮೇಲಿರುವುದು. ಹಾಗೆಯೇ ಪ್ರಪಂಚದ ಯಾವುದೇ ಕೆಲಸ ಮಾಡುತ್ತಿದ್ದರೂ ಮನಸ್ಸನ್ನು ಇಷ್ಟದೇವತೆ ಹಾಗೂ ಮಂತ್ರದ ಮೇಲಿಡಬೇಕು. ಇದು ಸಾಧ್ಯವೆನ್ನಲು ಹಲ್ಲುನೋವಿನ ದೃಷ್ಟಾಂತ. ಎರಡನೆಯದು ದಿಕ್ಸೂಚಿ, ಇದನ್ನು ಹೇಗೇ ಇಟ್ಟರೂ ಅದು ಉತ್ತರ ದಿಕ್ಕನ್ನೇ ತೋರಿಸುವುದು. ಹಾಗೆಯೇ ನಮ್ಮ ಮನಸ್ಸು ಸದಾ ಭಗವಂತನ ಕಡೆಗೆ ಮುಖವಾಗಿ, ಚಲಿಸುತ್ತಿರಬೇಕು. ಅಭ್ಯಾಸ ನಿರಂತರವಾಗಿದ್ದಲ್ಲಿ ಕಾಲ ಕ್ರಮೇಣ ಸಾಧ್ಯವಾಗುವುದು. ಭಗವಂತನ ಧ್ಯಾನ ಮಾಡುವಾಗ ಯಾವುದೋ ಪ್ರಾಪಂಚಿಕ ಕೆಲಸ ಬಂದಾಗ ಅದನ್ನು ಮಾಡುತ್ತೇವೆ. ಅದು ಮುಗಿದೊಡನೆ ಮತ್ತೆ ಬಿಟ್ಟಿರುವ ಭಗವಂತನ ಧ್ಯಾನ ಸ್ಮರಣೆಗೆ ಹೋಗಬೇಕು. ಹೀಗೆ ಮಾಡುತ್ತಿದ್ದಲ್ಲಿ ಮನಸ್ಸು ಶಾಶ್ವತವಾಗಿ ಭಗವಂತನಲ್ಲಿ ನಿಂತು ಮೋಕ್ಷ ತಂದುಕೊಡುವುದು. ಇವೆಲ್ಲವನ್ನೂ ಓದಿ ಮನದಟ್ಟು ಮಾಡಿಕೊಳ್ಳುವುದು ಸುಲಭ. ಇದನ್ನು ಅನುಷ್ಠಾನ, ಅಭ್ಯಾಸ ಮಾಡದ ಹೊರತು ಸಿದ್ಧಿಸದು. ಪ್ರಯತ್ನಿಸುವ ಮೊದಲು ಕಷ್ಟವೆಂದು ತೋರಿದರೂ, ಪ್ರಾರಂಭ ಮಾಡಿದ ನಂತರ, ಮುಂದುವರಿಸುವಾಗ ಅದು ಸಾಧ್ಯವೂ, ಸುಲಭವೂ ಆಗುವುದು.

ನಾತ್ಯಶ್ನತಸ್ತು ಯೋಗೋsಸ್ತಿ ನ ಚೈಕಾನ್ತಮನಶ್ನತಃ |

ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ || 6.16

ಎಲೈ ಅರ್ಜುನ, ಹೊಟ್ಟೆಬಾಕನಿಗೆ ಮಿತಿಮೀರಿ ತಿನ್ನುವವನಿಗೆ ಯೋಗವಿಲ್ಲ. ಅತಿ ಉಪವಾಸಿಯಾಗಿ ಏನೂ ತಿನ್ನದೆ ಇರುವವನಿಗೂ ಇಲ್ಲ; ಅತಿಯಾಗಿ ನಿದ್ರೆ ಮಾಡುವವನಿಗೂ ಮತ್ತು ಎಚ್ಚರವಾಗಿಯೇ ಇರುವವನಿಗೂ ಇಲ್ಲವೇ ಇಲ್ಲ.

‘ಯೋಗ’ ಶಬ್ದಕ್ಕೆ ಎರಡು ಅರ್ಥಗಳಿವೆ. ‘ಏಕಾಗ್ರತೆ ಸಮಾಧಿ’ ಎಂಬುದು ಒಂದು. ಇದು ಸಮಾಧಿಯಲ್ಲಿ ಕೊನೆಗಾಣಬೇಕು. ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವುದೆಂದು ಮತ್ತೊಂದು ಅರ್ಥ. ಯೋಗಸಾಧನೆಯಿಂದ ನಾನೇ ಪರಮಾತ್ಮನೆಂಬ ಅನುಭವ ಬರುವುದು. ಏಕಾಗ್ರತೆಯಿಂದ ಸಮಾಧಿ ಮೂಲಕ ನಾವು ಪರಮಾತ್ಮನಲ್ಲಿ ಒಂದು ಎಂಬುದನ್ನು ನೇರವಾಗಿ ಅನುಭವಕ್ಕೆ ತಂದುಕೊಳ್ಳಲು ಪ್ರಾಪಂಚಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದರ ಒಂದು ಭಾಗವನ್ನು ಭಗವಂತ ಇಲ್ಲಿ ಹೇಳಿದ್ದಾನೆ. ಅತಿ ದುರ್ಲಭವಾದ ಮನುಷ್ಯ ಜೀವನದಲ್ಲಿ ಮಾತ್ರ ಭಗವತ್ ಸಾಕ್ಷಾತ್ಕಾರ, ಮೋಕ್ಷ ಪಡೆಯಲು ಸಾಧ್ಯ ಎನ್ನುವರು ಶ್ರೀಶಂಕರರು. ಈ ಹಿನ್ನೆಲೆಯಲ್ಲಿ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಈ ಮನುಷ್ಯ ಜೀವನದಲ್ಲಿ ಚಿತ್ ಮತ್ತು ಅಚಿತ್ (ಸತ್ ಮತ್ತು ಅಸತ್) ಎಂಬ ಎರಡು ಭಾಗಗಳನ್ನು ಕಾಣುತ್ತೇವೆ. ದೇಹ-ಇಂದ್ರಿಯ-ಮನಸ್ಸು-ಪ್ರಾಣ-ಬುದ್ಧಿ ಇತ್ಯಾದಿ ಒಂದು ಭಾಗ. ಜೀವಾತ್ಮ-ವಸ್ತು, ಚೈತನ್ಯ ಮತ್ತೊಂದು ಭಾಗ. ನಿಜಕ್ಕೂ ಪ್ರತ್ಯೇಕವಾಗಿರುವ ಇವು ಸೇರಿಕೊಂಡಿವೆ. ಕೊಠಡಿ ಮತ್ತು ಕುಳಿತಿರುವ ವ್ಯಕ್ತಿ ಬೇರೆ ಎಂಬಂತೆ ಆತ್ಮನಿಗೆ ಚಿತ್ (ಸತ್), ಅಚಿತ್ (ಅಸತ್) ಬೇರೆಯೆಂಬ ಅನುಭವವಿರುತ್ತದೆ. ಪ್ರಾರಬ್ಧಕರ್ಮದ ವಶದಿಂದ ದೇಹದಲ್ಲಿ ಬಂಧಿತರಾಗಿದ್ದೇವೆ. ಆದರೆ ಅನುಭವದಲ್ಲಿ ನಾನೇ ಈ ದೇಹವೆಂಬ ಭಾವವಿದೆ. ಈ ಅಜ್ಞಾನ ಅನಾದಿಯಾದರೂ ಸಾಂತವಾಗಿದೆ. ಸಾಧನೆಯಿಂದ ಆತ್ಮಜ್ಞಾನ ಪಡೆದಲ್ಲಿ ಈ ಅಜ್ಞಾನವನ್ನು ನಾಶಗೊಳಿಸಬಹುದು. ವೇದಾಂತದಲ್ಲಿನ ಉದಾಹರಣೆಗೆ ಒಂದು ಸ್ಥಾನದಲ್ಲಿ ಮಡಕೆ ಇಲ್ಲದಿರುವುದು ಅನಾದಿ. ಆದರೆ ಒಂದು ಮಡಕೆ ತಂದಿಟ್ಟರೆ ಅನಾದಿಯಾದ ಮಡಕೆಯ ಅಭಾವ ಕೊನೆಯಾಗುವುದು. ಇದೇ ಸಾಂತ. ದೇಹವೇ ನಾನೆಂಬ ತಾದಾತ್ಮ್ಯಾವದ ಅಜ್ಞಾನದ ಪ್ರಾರಂಭ ನಮಗೆ ತಿಳಿಯದು. ಹಿಂದೂಧರ್ಮದ ಪ್ರಕಾರ ಈ ಸೃಷ್ಟಿ, ಸ್ಥಿತಿ, ಪ್ರಳಯ, ಅನಾದಿ, ಅನಂತ ಈ ಚಕ್ರದಲ್ಲಿ ಸಿಲುಕಿರುವ ನಾವು ವೇದಾಂತವನ್ನು ಸರಿಯಾಗಿ ಅರ್ಥಮಾಡಿಕೊಂಡು ಸಾಧನೆ ಮಾಡಿದಲ್ಲಿ ಕಾಲಕ್ರಮೇಣ ನಮಗೆ ನೇರವಾದ ಅಪರೋಕ್ಷಾನುಭೂತಿ ಬರುವುದು. ಆಗ ನಾನು ಹಾಗೂ ದೇಹ ಬೇರೆಯೆಂಬ ಬೋಧೆಯಾಗುವುದು. ಸತ್-ಚಿತ್-ಆನಂದವೇ ನಮ್ಮ ನಿಜಸ್ವರೂಪವೆಂದು ಮನದಟ್ಟಾಗುವುದು. ಶರೀರ ಇಂದ್ರಿಯಗಳು ಪ್ರಾಣ, ಮನಸ್ಸುಗಳ ಸೇರಿ ನಾನು ಎಂಬ ಭಾವನೆಯ ದೇಹವಿದೆ. ಪ್ರಾರಬ್ಧ ಕರ್ಮವಶದಿಂದ ಇರುವಷ್ಟು ಕಾಲ ದೇಹವನ್ನು ಸರಿಯಾಗಿಟ್ಟುಕೊಳ್ಳಬೇಕು. ಕಾರಣವೆಂದರೆ ಈ ದೇಹದ ಸಾಧನೆಯಿಂದ ಮಾತ್ರ ಆತ್ಮಜ್ಞಾನ, ಮೋಕ್ಷ ಪಡೆಯಲು ಸಾಧ್ಯ. ಶರೀರ ಧರ್ಮವನ್ನು ಅರಿತು, ಅದನ್ನು ಪಾಲಿಸಿದಲ್ಲಿ ಅದು ತನ್ನ ಪೂರ್ಣ ಪ್ರಯೋಜನವನ್ನು ನೀಡುವುದು.

ಪುರೋಹಿತನೊಬ್ಬ ಮಗನನ್ನು ಮೊದಲ ಬಾರಿಗೆ ಬೇರೆಯವರ ಮನೆಗೆ ಊಟಕ್ಕೆ ಕರೆದೊಯ್ದಿದ್ದಾನೆ. ಹುಡುಗ ಸಂಕೋಚದಿಂದ ಊಟಮಾಡಲು ಹಿಂಜರಿಯುತ್ತಿದ್ದಾನೆ. ಆಗ ತಂದೆಯು, ಭೋಜನಂ ಕುರು ದುರ್ಬುದ್ಧೇ

ಶರೀರೇ ಮಾ ದಯಾಂ ಕುರು | ಪರಾನ್ನಂ ದುರ್ಲಭಂ ಲೋಕೇ ಶರೀರಂ ಜನ್ಮ ಜನ್ಮನಿ || ‘ಬೇರೆ ಮನೆಯ ಊಟ ಸಿಗುವುದು ಕಷ್ಟ. ಶರೀರ ಜನ್ಮಜನ್ಮಕ್ಕೂ ಸಿಗುವುದು. ಶರೀರದ ಮೇಲೆ ದಯೆಯನ್ನು ತೋರದೆ ಚೆನ್ನಾಗಿ ಊಟ ಮಾಡು’ ಎಂದನು. ನಾವು ಇದನ್ನೇ ಮಾಡುತ್ತಿದ್ದೇವೆ. ನಾವೇ ಶರೀರವೆಂದು, ನಾಲಿಗೆ ರುಚಿಗೆ ಬಲಿಬಿದ್ದು ಅತಿಯಾಗಿ ಊಟ ಮಾಡುತ್ತಿದ್ದೇವೆ. ಅತಿಯಾಗಿ ಊಟ ಮಾಡುತ್ತೇವೆ. ಇದನ್ನು ಮಾಡಬಾರದೆಂದು ಪರಮಾತ್ಮ ಹೇಳುತ್ತಿದ್ದಾನೆ. ಇವನಿಗೆ ಯೋಗವೆಂಬುದು ಬಹುದೂರದ ಮಾತಾಗುವುದು. ಮತ್ತೊಬ್ಬ ಅತಿ ಉಪವಾಸಿ ಇದರಿಂದ ಶರೀರ ದುರ್ಬಲವಾಗಿ ಸಾಧನೆ ಅಸಾಧ್ಯವಾಗುವುದು. ಶಿವರಾತ್ರಿ ಜಾಗರಣೆ ಮಾಡಿ ಮರುದಿನ ಇಡೀ ನಿದ್ದೆ, ತೂಕಡಿಕೆ. ಇದೂ ಪ್ರಯೋಜನವಿಲ್ಲ.

ಅತಿ ನಿದ್ದೆಯಿಂದ ಸೋಮಾರಿತನವೆಂಬ ಕೆಟ್ಟ ತಮೋಗುಣ ಹೆಚ್ಚಿ, ಆಲಸ್ಯ ಬರುವುದು. ಅತಿ ಎಚ್ಚರವೂ ಕೂಡ ಸರಿಯಾದುದಲ್ಲ. ಎಂದರೆ ಅತಿಯಾದುದನ್ನು ಎಲ್ಲೆಡೆಯೂ ಬಿಡಬೇಕು. ಬುದ್ಧನ ಜೀವನದ ಕಥೆ. ಅವನೊಮ್ಮೆ ತಪಸ್ಸು ಮಾಡುತ್ತಾ ಇಪ್ಪತ್ತೊಂದು ದಿನಗಳು ಅಲುಗಾಡದೆ ಉಪವಾಸ ಮಾಡಿದ ನಂತರ ಏಳಲು ಪ್ರಯತ್ನಿಸಿದರೆ ಶಕ್ತಿಯೇ ಇಲ್ಲ, ಜ್ಞಾನತಪ್ಪಿ ಬಿದ್ದನು. ಆಗ ಸುಜಾತ ಎಂಬವಳು ಬಂದು ಪಾಯಸವನ್ನು ಕೊಟ್ಟು ಜೀವ ಉಳಿಸಿದಳು. ಎಚ್ಚರ ತಪ್ಪಿದಾಗ ಅವನಿಗೊಂದು ದರ್ಶನವಾಯಿತು. ಕೈಯಲ್ಲಿ ವೀಣೆ ಹಿಡಿದ ದೇವತೆ ಕಾಣಿಸಿಕೊಂಡಳು. ಅವಳು ವೀಣೆಯ ತಂತಿಗಳನ್ನು ಸಡಿಲಗೊಳಿಸಿ ವೀಣೆ ನುಡಿಸಿದರೆ ನಾದವೇ ಹೊರಹೊಮ್ಮುತ್ತಿಲ್ಲ. ನಂತರ ಆ ತಂತಿಗಳನ್ನು ಹದವಾಗಿ ಬಿಗಿಮಾಡಿ ನುಡಿಸಿದಾಗ ಸೊಗಸಾದ ಸಂಗೀತ ನಿನಾದ ಪಸರಿಸಿತು. ಮತ್ತೆ ಆ ತಂತಿಗಳನ್ನು ಅತಿ ಬಿಗಿಯಾಗಿ ಮಾಡಿದಾಗ ತಂತಿಗಳು ಕಿತ್ತುಹೋದವು. ಇನ್ನೆಲ್ಲಿಯ ಸಂಗೀತ? ಇವೆಲ್ಲವನ್ನು ತೋರಿಸಿ ಆ ದೇವಿ, ‘ದೇಹವು ವೀಣೆ ಇದ್ದಂತೆ. ಸಡಿಲ ಅಥವಾ ಬಿಗಿಯಾದಾಗ ಸಂಗೀತ ಬರದು, ಮಧ್ಯಸ್ಥವಾದಾಗ ಮಾತ್ರ ಸಂಗೀತ. ನಾವು ಸದಾ ಮಧ್ಯದ ದಾರಿ ಅನುಸರಿಸಬೇಕು’ ಎಂದಳು. ಬುದ್ಧನಿಗೆ ಹೀಗೆ ಉಪವಾಸದಿಂದ ಶರೀರವನ್ನು ನಾಶ ಮಾಡುವುದು ಸರಿಯಲ್ಲವೆಂದು ಅರ್ಥವಾಯ್ತು. ಯೋಗ ಸಾಧಿಸಲು ಭೋಜನ ಹಾಗೂ ನಿತ್ಯದ ವ್ಯವಹಾರದಲ್ಲಿ ಮಧ್ಯದ ದಾರಿ ಹಿಡಿಯಬೇಕು.

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |

ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ || 6.17

ಆಹಾರ-ವಿಹಾರ ಮತ್ತು ನಿದ್ರೆ-ಎಚ್ಚರಗಳಲ್ಲಿ ಮಿತವಾಗಿರುವವನಿಗೆ ಯೋಗವು ದುಃಖನಾಶಕವಾಗುತ್ತದೆ. ಯುಕ್ತವೆಂದರೆ ಅಗತ್ಯವಿದ್ದಷ್ಟು, ಈ ಸೂತ್ರವನ್ನು ಎಲ್ಲದರಲ್ಲಿಯೂ ಅನುಸರಿಸಿದಲ್ಲಿ ಯೋಗವು ದುಃಖವನ್ನು ನಿವಾರಿಸುವುದು. ಇದನ್ನೇ ಶ್ರೀಶಂಕರರು ‘ನಿಯತ ಪರಿಮಾಣೌ’ ಎನ್ನುವರು. ಹೊಟ್ಟೆಯನ್ನು ಅರ್ಧಭಾಗ ಗಟ್ಟಿ ಆಹಾರದಿಂದ, ಕಾಲುಭಾಗ ನೀರಿನಿಂದ ತುಂಬಿ, ಕಡೆಯ ಕಾಲುಭಾಗವನ್ನು ವಾಯುಸಂಚಾರಕ್ಕೆ ಬಿಡಬೇಕೆನ್ನುವುದು ಆಯುರ್ವೆದ. ಸ್ವಲ್ಪ ಹಸಿವಿದೆ ಎನ್ನುವಾಗಲೇ ಊಟ ನಿಲ್ಲಿಸಬೇಕು. ಇದರಿಂದ ಆರೋಗ್ಯವು ಉತ್ತಮವಾಗುವುದು. ಮನಸ್ಸಿಗೆ ಬದಲಾವಣೆಯಾಗಿ ತಿರುಗಾಡುತ್ತೇವೆ, ಕೆಲಸಗಳನ್ನು ಮಾಡುತ್ತೇವೆ. ಇವೂ ಕೂಡ ಯುಕ್ತವಾಗಿ ಶರೀರದ ಶಕ್ತಿಗೆ ತಕ್ಕಂತೆ ಮಾಡಬೇಕು. ಅತಿಯಾದರೆ ಆಯಾಸ, ಕಡಿಮೆಯಾದರೆ ಶರೀರ ಕೆಡುವುದು. ಇವೆರಡೂ ಸಲ್ಲದು. ಇದೇ ಸೂತ್ರವನ್ನು ನಿದ್ದೆ-ಎಚ್ಚರಗಳಲ್ಲಿ ಪಾಲಿಸಬೇಕು. ರಾತ್ರಿಯನ್ನು ಮೂರು ಭಾಗ ಮಾಡಬೇಕೆನ್ನುವುದು ಶಾಸ್ತ್ರ. ಸಂಜೆ ಆರರಿಂದ ಬೆಳಗ್ಗೆ ಆರರವರೆಗೆ ರಾತ್ರಿ. ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಹಗಲು. ಸಂಜೆ ಆರರಿಂದ ರಾತ್ರಿ ಹತ್ತು, ರಾತ್ರಿ ಹತ್ತರಿಂದ ಮಧ್ಯರಾತ್ರಿ ಎರಡು, ಮಧ್ಯರಾತ್ರಿ ಎರಡರಿಂದ ಬೆಳಗ್ಗೆ ಆರು - ಇದರಲ್ಲಿ ಮಧ್ಯದ ಭಾಗದಲ್ಲಿ ಮಾತ್ರ ಮಲಗಿರಬೇಕೆಂದೂ, ಉಳಿದೆರಡು ಭಾಗಗಳಲ್ಲಿ ಎಚ್ಚರವಿರಬೇಕೆನ್ನುವುದು ಶಾಸ್ತ್ರ. ಒಟ್ಟಿನಲ್ಲಿ ಶರೀರಕ್ಕೆ ಅಗತ್ಯವಿದ್ದಷ್ಟು ನಿದ್ದೆ ಮಾಡಬೇಕು. ಸಾಮಾನ್ಯವಾಗಿ ಮಕ್ಕಳಿಗೆ ಎಂಟು, ಪ್ರೌಢರಿಗೆ ಆರು, ವೃದ್ಧರಿಗೆ ನಾಲ್ಕು ಗಂಟೆ ನಿದ್ದೆ ಸಾಕು. ಅತಿ ಎಚ್ಚರವೂ ಹಾನಿಕರ. ಇದರಿಂದ ಉಳಿದ ಕೆಲಸ ಮಾಡುವಾಗ ಆಯಾಸವಾಗಿ ಕೆಲಸ ಕೆಡುವುದು. ಬರಬಾರದ ಸಮಯದಲ್ಲಿ ತೂಕಡಿಕೆ ಬರುವುದು. ಮೇಲಿನಂತೆ ಸರಿಯಾಗಿ ಯೋಗ ಮಾಡಿ, ನಡೆದುಕೊಂಡಾಗ ಅದು ಎಲ್ಲ ರೀತಿಯ ದುಃಖಗಳನ್ನು ಹೋಗಲಾಡಿಸುವುದು.

(ನಿರೂಪಣೆ: ರಾಮಾಯಣ ಸುರೇಶ್​ಕುಮಾರ್)