ನ್ಯೂಸ್

ಬೆಂಗ್ಳೂರು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸಿದ ಜರ್ಮನಿ ಸಚಿವ: ಡಿಜಿಟಲ್ ಇಂಡಿಯಾ ಬಗ್ಗೆ ಮೆಚ್ಚುಗೆ

ಬೆಂಗಳೂರು: ನಗರದ ಮಡಿವಾಳ ಮಾರುಕಟ್ಟೆಯಲ್ಲಿ ಜರ್ಮನಿಯ ಸಚಿವರೊಬ್ಬರು ಮೆಣಸಿನಕಾಯಿ ಖರೀದಿ ಮಾಡಿ, ಯುಪಿಐ ಮೂಲಕ ಪಾವತಿ ಮಾಡಿರುವುದು ಗಮನ ಸೆಳೆದಿದೆ. ಈ ಬಗ್ಗೆ ಭಾರತದಲ್ಲಿರುವ ಜರ್ಮನಿ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ.

ಜರ್ಮನಿಯ ಡಿಜಿಟಲ್‌ ಮತ್ತು ಸಾರಿಗೆ ಸಚಿವ ವೋಲ್ಕರ್‌ ವಿಸ್ಸಿಂಗ್ ಅವರು ಮಡಿವಾಳ ಮಾರುಕಟ್ಟೆಯಲ್ಲಿ 1 ಕೆಜಿ ಮೆಣಸಿನಕಾಯಿ ಖರೀದಿ ಮಾಡಿ, ವ್ಯಾಪರಸ್ಥನಿಗೆ ಯುಪಿಐ ಮೂಲಕ ಹಣ ಪಾವತಿ ಮಾಡಿದರು.

ಜರ್ಮನಿ ರಾಯಭಾರ ಕಚೇರಿ ಎಕ್ಷ್​ (ಟ್ವಿಟರ್​) ನಲ್ಲಿ ಸಚಿವರು ಮೆಣಸಿನಕಾಯಿ ಖರೀದಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಭಾರತದ ಯಶಸ್ಸಿನ ಕಥೆಯೆಂದರೆ ಡಿಜಿಟಲ್ ಮೂಲಸೌಕರ್ಯ. ಯುಪಿಐ ಮೂಲಕ ಸೆಕೆಂಡ್‌ಗಳಲ್ಲಿ ವಹಿವಾಟು ನಡೆಸಲು ಎಲ್ಲರಿಗೂ ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ. ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಸಚಿವ ವೋಲ್ಕರ್‌ ವಿಸ್ಸಿಂಗ್ ಯುಪಿಐ ಪಾವತಿಗಳ ಸರಳತೆಯನ್ನು ತಮ್ಮ ಕೈನಿಂದಲೇ ಅನುಭವಿಸಿದ್ದಾರೆ ಮತ್ತು ಇದು ಬಹಳ ಆಕರ್ಷಿತವಾಗಿದೆ ಎಂದು ಎಕ್ಷ್​ನಲ್ಲಿ ತಿಳಿಸಲಾಗಿದೆ.

ಅಂದಹಾಗೆ ವೋಲ್ಕರ್‌ ವಿಸ್ಸಿಂಗ್ ಅವರು ಸಭೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಅಡ್ಡಾಡಿ, ವ್ಯಾಪಾರ ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸಿದರು. ಬಳಿಕ ತಾವೇ ಮೆಣಸಿನಕಾಯಿ ಖರೀದಿ ಮಾಡಿದರು.

ಯುಪಿಐ ಕುರಿತು

ಭಾರತದ UPI ವ್ಯವಸ್ಥೆ ತುಂಬಾ ಸರಳ ಮತ್ತು ಸುರಕ್ಷಿತವಾಗಿದೆ. ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್​ನಲ್ಲಿ ನಿರ್ವಹಹಿಸುವ ಅಧಿಕಾರವನ್ನು ನೀಡುತ್ತದೆ. ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳು ಯುಪಿಐನಲ್ಲಿ ವಿಲೀನಗೊಂಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) 2016ರ ಏಪ್ರಿಲ್ 21ರಂದು ತನ್ನ ಸದಸ್ಯ ಬ್ಯಾಂಕ್‌ಗಳೊಂದಿಗೆ ಪ್ರಾಯೋಗಿಕವಾಗಿ ಯುಪಿಐ ಅನ್ನು ಜಾರಿಗೆ ತಂದಿತು. ಅಂದಿನಿಂದ UPI ಬಳಕೆಯು ಅದ್ಭುತ ಬೆಳವಣಿಗೆಯನ್ನು ಕಂಡಿದೆ.