ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಸಂಸತ್ ಅಧಿವೇಶನದ ವೇಲೆ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಉದ್ಯಮಿ ದರ್ಶನ್ ಹೀರಾನಂದಾನಿಗೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಲೋಕಸಭಾ ಖಾತೆಯ ಲಾಗಿನ್ ಐಡಿಯ ವಿವರಗಳನ್ನು ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸಂಸದೆ ಮಹುವಾ ಮೊಯಿತ್ರಾ, ಲಾಗಿನ್ ಐಡಿಯ ವಿವರಗಳನ್ನು ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಭಾರಿ ಮೊತ್ತದ ಲಂಚ ಪಡೆದ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ತಮ್ಮ ಹೆಸರಿನಲ್ಲಿ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಹೀರಾನಂದಾನಿ ಅವರಿಗೆ ಲಾಗಿನ್ ಐಡಿ ಕೊಟ್ಟು, ಲೋಕಸಭಾ ಖಾತೆ ಬಳಸಲು ಅನುವು ಮಾಡಿಕೊಂಡಿದ್ದನ್ನು ಒಪ್ಪಿಕೊಂಡಿರುವ ಮಹುವಾ, ಹೀರಾನಂದಾನಿ ಸಮೂಹದ ಸಿಇಒ ದರ್ಶನ್ ಅವರಿಂದ ಒಂದು ಸ್ಕಾರ್ಫ್, ಕೆಲವು ಲಿಪ್‌ಸ್ಟಿಕ್‌ಗಳು ಮತ್ತು ಐ ಶ್ಯಾಡೋ ಸೇರಿದಂತೆ ವಿವಿಧ ಮೇಕಪ್ ವಸ್ತುಗಳನ್ನು ಮಾತ್ರವೇ ಉಡುಗೊರೆಯಾಗಿ ಪಡೆದಿರುವುದಾಗಿ ತಿಳಿಸಿದ್ದಾರೆ.
ಸಂಸತ್‌ನಲ್ಲಿ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಹೀರಾನಂದಾನಿ ಅವರಿಂದ ಭಾರಿ ಮೊತ್ತದ ನಗದು ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂಬ ಆರೋಪಗಳ ನಡುವೆ ಅವರು ಈ ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಹಿರಾನಂದಿನ ಬಳಿ ಮಹುವಾ ಮೊಯಿತ್ರಾ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪ ಮಾಡಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಮೊಯಿತ್ರಾ ಮತ್ತು ಉದ್ಯಮಿ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿರುವ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ. ಇದರ ನಡುವೆ ಕಳೆದ ಗುರುವಾರ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್, ಸಮಿತಿಯ ಮುಂದೆ ಸಂಸದೆ ವಿರುದ್ಧವಾಗಿ ಮೌಖಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದಾರೆ.
ದುಬೆ ಮತ್ತು ದೇಹಾದ್ರಾಯಿ ಅವರು ತಮ್ಮ ವಿರುದ್ಧ ಹೊರಿಸಿರುವ “ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳ” ವಿರುದ್ಧ ತನ್ನನ್ನು ತಾನು ಸಮರ್ಥಿಸಿಕೊಳ್ಳಲು “ನ್ಯಾಯಯುತವಾದ ವಿಚಾರಣೆ ಮತ್ತು ಸಾಕಷ್ಟು ಅವಕಾಶ” ನೀಡಬೇಕು ಎಂದು ಮಹುವಾ ಮೊಯಿತ್ರಾ ಸಮಿತಿ ಮುಂದೆ ಹೇಳಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಮಹುವಾ ವಿರುದ್ಧ ಆರೋಪಿಸಿದ್ದಲ್ಲದೆ, ಅವರ ಲೋಕಸಭೆಯ ಲಾಗಿನ್ ಐಡಿಗಳನ್ನು ಸಹ ಉದ್ಯಮಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ದುಬೆ ಆರೋಪ ಮಾಡಿದ್ದಾರೆ. ಆದರೆ, ಇದಕೆಲ್ಲ ದಾಖಲೆಗಳನ್ನು ಮುಂದಿಟ್ಟು ಮಾತನಾಡಿ ಎಂದು ಮಹುವಾ ತಿರುಗೇಟು ನೀಡಿದ್ದಾರೆ. ಅಲ್ಲದೆ, ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಸರ್ಕಾರವೇ ತರಬೇತಿ ನೀಡಿದೆ ಎಂದು ಮಹುವಾ ಆರೋಪ ಮಾಡಿದ್ದಾರೆ.