Gautam Gambhir: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಭಾರತ ತಂಡದಿಂದ ಹೊರಗಿಟ್ಟಿದ್ದು ತಮ್ಮ ಕೋಚಿಂಗ್ ಅವಧಿಯ ಅತ್ಯಂತ ಕಠಿಣ ನಿರ್ಧಾರವಾಗಿತ್ತು ಎಂದಿರುವ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಈ ನಿರ್ಧಾರದಿಂದಾಗಿ ತಮಗೆ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಟಿ20 ವಿಶ್ವಕಪ್ ಗೆದ್ದಾಗ ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೂ ಕೂಡ ಜುಲೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದ ನಂತರ ಅವರು ತಂಡದಲ್ಲಿದ್ದ ಸ್ಥಾನವನ್ನು ಕಳೆದುಕೊಂಡಿದ್ದರು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಅವರ ಜಾಗಕ್ಕೆ ವೈಭವ್ ಸೂರ್ಯವಂಶಿ ಬಂದಿದ್ದು, ತಮ್ಮ ಟಿ20ಐ ಪಾದಾರ್ಪಣೆ ಮಾಡಿದರು.
ಇದಾದ ನಂತರ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಯಾಮ್ಸನ್ ಮತ್ತೆ ಭಾರತದ ಪ್ಲೇಯಿಂಗ್ 11ಗೆ ಮರಳಿದರು. ಈ ಅವಕಾಶವನ್ನು ಬಳಸಿಕೊಂಡ ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ಸನ್, ಸತತ ಎರಡು ಅರ್ಧಶತಕಗಳನ್ನು ಸಿಡಿಸಿ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಲು ನೆರವಾದರು.
ಜಿಯೋಸ್ಟಾರ್ ಜೊತೆ ಮಾತನಾಡಿದ ಗಂಭೀರ್, ವಿಶ್ವಕಪ್‌ನಲ್ಲಿ ಯಶಸ್ಸು ಕಂಡಿದ್ದರೂ ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರದ ಹಿಂದಿನ ಆಲೋಚನೆಯನ್ನು ಹಂಚಿಕೊಂಡರು. ಭಾರತದ ಹೆಡ್ ಕೋಚ್ ಆಗಿ ತಾವು ಅಧಿಕಾರ ವಹಿಸಿಕೊಂಡ ನಂತರ ತೆಗೆದುಕೊಂಡ ಇತರ ಯಾವುದೇ ನಿರ್ಧಾರಕ್ಕಿಂತ ಈ ಕಠಿಣ ತೀರ್ಮಾನ ತಮ್ಮ ಮೇಲೆ ಹೆಚ್ಚು ಪರಿಣಾಮ ಬೀರಿತು ಎಂದು ಒಪ್ಪಿಕೊಂಡಿದ್ದಾರೆ. ನನ್ನ ಎರಡು ವರ್ಷಗಳ ಕೋಚಿಂಗ್ ಪ್ರಯಾಣದಲ್ಲಿ, ನಾನು ನಿದ್ದೆ ಮಾಡಲಾಗದ ಏಕೈಕ ರಾತ್ರಿ ಅದಾಗಿತ್ತು. ಈ ವಿಷಯವನ್ನು ನಾನು ಸಂಜು ಬಳಿಯೂ ಹೇಳಿದೆ. ಏಕೆಂದರೆ ಟಿ20 ಮಾದರಿಯಲ್ಲಿ ನನ್ನ ಕೋಚಿಂಗ್ ಅವಧಿಯ ಅತ್ಯಂತ ಕಠಿಣ ನಿರ್ಧಾರ ಇದಾಗಿತ್ತು ಎಂಬುದು ನನಗೆ ತಿಳಿದಿತ್ತು ಎಂದು ಗಂಭೀರ್ ತಿಳಿಸಿದ್ದಾರೆ.
ಸ್ಯಾಮ್ಸನ್ ವಿಶ್ವಕಪ್ ಗೆಲುವಿನ ಅಭಿಯಾನದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ತಕ್ಷಣವೇ, ಕೇವಲ ಮೂರು ಅಥವಾ ನಾಲ್ಕು ಪಂದ್ಯಗಳ ನಂತರ ಅವರನ್ನು ತಂಡದಿಂದ ಹೊರಗಿಡಬೇಕಾಗಿ ಬಂದದ್ದು ತಮಗೆ ಅತ್ಯಂತ ಕಷ್ಟಕರವಾದ ಸನ್ನಿವೇಶವಾಗಿತ್ತು ಎಂದಿರುವ ಗಂಭೀರ್, ವೈಭವ್ ಅತ್ಯುತ್ತಮ ಫಾರ್ಮ್ ಮತ್ತು ಸರಣಿಯನ್ನು ಗೆಲ್ಲಲು ಇನ್ನಿಂಗ್ಸ್‌ನ ಆರಂಭದಲ್ಲಿ ಹೆಚ್ಚಿನ ರನ್‌ಗಳ ಅಗತ್ಯವಿದ್ದುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಾವು ಸ್ಯಾಮ್ಸನ್ ಜೊತೆ ನೇರವಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿರುವ ಗಂಭೀರ್, ವೈಭವ್ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಆರಂಭಿಕ ವಿಕೆಟ್‌ಗೆ ನಮಗೆ ಉತ್ತಮ ಅಡಿಪಾಯ ಬೇಕಾಗಿದೆ ಎಂದು ಸಂಜುಗೆ ವಿವರಿಸಿದೆ. ಅವರು ಕೂಡ ಇದನ್ನು ಅರ್ಥಮಾಡಿಕೊಂಡು ಒಪ್ಪಿಕೊಂಡರು ಎಂದಿದ್ದಾರೆ.
ಅಫ್ಘಾನ್ ಸರಣಿಗೆ ಸಂಜು ಸ್ಯಾಮ್ಸನ್ ಮತ್ತೆ ತಂಡಕ್ಕೆ ಮರಳಿದ ನಂತರ, ವೈಭವ್ ಸೂರ್ಯವಂಶಿ ಫಾರ್ಮ್ ತಂಡದ ಆಯ್ಕೆಯಲ್ಲಿ ಮತ್ತೊಂದು ಗೊಂದಲವನ್ನು ಸೃಷ್ಟಿಸಿತು. ಯುವ ಬ್ಯಾಟರ್ಗೆ ಇಂಗ್ಲೆಂಡ್‌ನಲ್ಲಿ ಅವಕಾಶ ನೀಡಲಾಗಿತ್ತಾದರೂ, ಕೇವಲ ಉತ್ತಮ ಪ್ರದರ್ಶನ ನೀಡಿದ ತಕ್ಷಣವೇ ಆಡುವ ಹನ್ನೊಂದರ ಬಳಗದಲ್ಲಿ ಖಾಯಂ ಸ್ಥಾನ ಸಿಗುವುದಿಲ್ಲ ಎಂಬುದನ್ನು ಗಂಭೀರ್ ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಟೀಮ್ ಇಂಡಿಯಾ ಹೆಡ್ ಕೋಚ್, ಸೋಷಿಯಲ್ ಮೀಡಿಯಾ ಅಥವಾ ಹೊರಗಿನ ಮಾತುಗಳು ಪ್ಲೇಯಿಂಗ್ 11 ಅನ್ನು ನಿರ್ಧರಿಸುವುದಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಕೋಚ್ ಮತ್ತು ನಾಯಕ ಯಾರಿಂದ ಪಂದ್ಯ ಗೆಲ್ಲಲು ಸಾಧ್ಯ ಎಂದು ಭಾವಿಸುತ್ತಾರೋ, ದೀರ್ಘಕಾಲದಿಂದ ಯಾರು ಉತ್ತಮವಾಗಿ ಆಡಿದ್ದಾರೋ ಅವರನ್ನು ಆಧರಿಸಿ ತಂಡವನ್ನು ನಿರ್ಧರಿಸಲಾಗುತ್ತದೆ. ಕಳೆದ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಉತ್ತಮ ಆಟವಾಡಿದ ಜೋಡಿಯನ್ನು, ಕೇವಲ ಮೂರ್ನಾಲ್ಕು ಪಂದ್ಯಗಳ ವೈಫಲ್ಯದ ಕಾರಣಕ್ಕೆ ದಿಢೀರನೆ ಬೇರ್ಪಡಿಸಿ, ಅತ್ಯಂತ ಪ್ರತಿಭಾವಂತ ಮತ್ತು ಫಾರ್ಮ್‌ನಲ್ಲಿರುವ ಯುವ ಆಟಗಾರನಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಗಂಭೀರ್ ಪ್ರತಿಪಾದಿಸಿದ್ದಾರೆ.
ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ, ಆದರೆ ಮ್ಯಾನೇಜ್‌ಮೆಂಟ್ ದೃಷ್ಟಿಯಲ್ಲಿ ಯಾವುದು ಸರಿಯೋ ಆ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟಕರವಾದ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್).