ನವದೆಹಲಿ: ದೇಶದೆಲ್ಲೆಡೆ ಕರೊನಾ ಭೀತಿ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಜನ ಸೇರುವುದು ಬೇಡ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ. ಅಲ್ಲದೆ, ಪಬ್, ಬಾರ್, ರೆಸ್ಟೋರೆಂಟ್, ಮಾಲ್ ಮತ್ತು ಥಿಯೇಟರ್ಗಳನ್ನು ಒಂದು ವಾರಗಳ ಮುಚ್ಚುವಂತೆ ಅನೇಕ ರಾಜ್ಯಗಳಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ವೀಕೆಂಡ್ ವೇಳೆ ಪಾರ್ಟಿ ಮಾಡುವುದಾದರೂ ಹೇಗೆಂದು ಯೋಚಿಸುತ್ತಿರುವ ಸಮಯದಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ವಿಶೇಷ ಐಡಿಯಾವೊಂದನ್ನು ಹೊತ್ತು ತಂದಿದೆ.
ಹೌದು, ಹಿಂದು ಮಹಾಸಭಾಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಭೀತಿ ನಡುವೆಯೇ ಗೋಮೂತ್ರ ಪಾರ್ಟಿ ಆಯೋಜನೆ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಅಕ್ಷರಶಃ ಅಚ್ಚರಿಗೆ ಒಳಗಾಗಿದ್ದಾರೆ.
ಗೋಮೂತ್ರ, ಸಗಣಿ ಮತ್ತು ಇತರೆ ಗೋವು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಚಕ್ರಪಾಣಿ ಈ ಮೊದಲೇ ಹೇಳಿದ್ದರು. ಈ ಬಗ್ಗೆ ಮಾತನಾಡಿ, ಟೀ ಪಾರ್ಟಿಯಂತೆ ಗೋಮೂತ್ರ ಪಾರ್ಟಿ ಆಯೋಜಿಸಲು ನಾವು ನಿರ್ಧಾರ ಮಾಡಿದೆವು. ಇಂತಹ ಪದಾರ್ಥಗಳ ಸೇವನೆಯಿಂದ ಜನರು ಕರೊನಾ ವೈರಸ್ನಿಂದ ಬಚಾವ್ ಆಗಬಹುದು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸುಮಾರು 200 ಮಂದಿ ಭಾಗವಹಿಸಿದ್ದರು. ಇಂತಹ ಕಾರ್ಯಕ್ರಮವನ್ನು ದೇಶಾದ್ಯಂತ ನಡೆಸುವ ಮೂಲಕ ಗೋಮೂತ್ರದ ಬಗ್ಗೆ ಅರಿವು ಮೂಡಿಸುವ ಇಂಗಿತವನ್ನು ಸಂಘಟನೆ ವ್ಯಕ್ತಪಡಿಸಿದೆ. (ಏಜೆನ್ಸೀಸ್)