ನ್ಯೂಸ್

ಬಾಲಿವುಡ್​ನಲ್ಲಿ ವೆಬ್​ಸಿರೀಸ್​ ಆಗಲಿದೆ ವಿಕಾಸ್​ ದುಬೆ ಎನ್​ಕೌಂಟರ್​ ಪ್ರಕರಣ

ಈಗಾಗಲೇ ನೈಜ ಘಟನಾವಳಿಗಳನ್ನೇ ಆಧರಿಸಿ ಸಾಕಷ್ಟು ಸಿನಿಮಾಗಳು ವೆಬ್​ಸಿರೀಸ್​ಗಳು ಮೂಡಿಬಂದಿವೆ. ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಹನ್ಸಲ್​ ಮೆಹ್ತಾ ಇತ್ತೀಚೆಗಷ್ಟೇ ಎನ್​ಕೌಂಟರ್​ನಲ್ಲಿ ಪ್ರಾಣಬಿಟ್ಟ ನಟೋರಿಯಸ್​ ವಿಕಾಸ್​ ದುಬೆ ಕುರಿತ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

ಈಗಾಗಲೇ ತನು ವೆಡ್ಸ್ ಮನು, ಶಾಹಿದ್, ಒಮೆರ್ಟಾ, ಜಡ್ಜ್​ಮೆಂಟಲ್​ ಹೈ ಕ್ಯಾ ಸೇರಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದ ಶೈಲೇಶ್ ಆರ್. ಸಿಂಗ್​ ವಿಕಾಸ್​ ದುಬೆ ಕುರಿತು ವೆಬ್​ಸಿರೀಸ್​ ನಿರ್ಮಾಣ ಮಾಡಲಿದ್ದು, ನ್ಯಾಶನಲ್​ ಅವಾರ್ಡ್ ವಿನ್ನರ್​ ಹನ್ಸಲ್​ ಮೆಹ್ತಾ ಈ ವೆಬ್​ಸಿರೀಸ್​ಗೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.

8 ಜನ ಪೊಲೀಸರನ್ನು ಹತ್ಯೆಗೈದಿದ್ದ ವಿಕಾಸ್​ ದುಬೆ, ಬಂಧನದ ಏಳು ದಿನಗಳ ಬಳಿಕ ಎನ್​ಕೌಂಟರ್​ ಮಾಡಲಾಗಿತ್ತು. ಸದ್ಯ ಈ ವೆಬ್​ಸಿರೀಸ್​ನಲ್ಲಿ ರಾಜಕೀಯದ ನೆರಳೂ ಇರಲಿದ್ದು, ಥ್ರಿಲ್ಲರ್​ ಶೈಲಿಯಲ್ಲಿ ಮೂಡಿಬರಲಿದೆಯಂತೆ.

ಇನ್ನು ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ? ಶೂಟಿಂಗ್​ ಯಾವಾಗಿನಿಂದ ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ತಂಡ ಘೋಷಣೆ ಮಾಡಲಿದೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸಕ್ಕೆ ನಿರ್ದೇಶಕರು ಚಾಲನೆ ನೀಡಲಿದ್ದಾರೆ.

ಇನ್ನು ಎಂಟು ಪೊಲೀಸರನ್ನು ಅಮಾನುಷವಾಗಿ ಕೊಂದ ಪಾತಕಿ ವಿಕಾಸ್ ದುಬೆ ಕುರಿತ ಚಿತ್ರ ಬರಲಿದೆ ಎಂಬ ಸುದ್ದಿ ಈ ಹಿಂದೆ ಬಾಲಿವುಡ್​ ಹರಿದಾಡಿತ್ತು. ಸಂದೀಪ್ ಕುಮಾರ್ ಎನ್ನುವವರು ತಾವು ವಿಕಾಸ್ ಕುರಿತು ಚಿತ್ರ ಮಾಡುತ್ತಿರುವುದಾಗಿಯೂ, ಮನೋಜ್ ಬಾಜ್ಪೇಯಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಎಲ್ಲಾ ಕಡೆ ಹೇಳಿಕೊಂಡಿದ್ದರು. ಯಾವಾಗ ವಿಕಾಸ್ ದುಬೆ ಕುರಿತಾಗಿ ಒಂದು ಚಿತ್ರ ಆಗುತ್ತಿದೆ ಮತ್ತು ಅದರಲ್ಲಿ ತಾನು ಕುಖ್ಯಾತನ ಪಾತ್ರ ಮಾಡುತ್ತಿದ್ದೀನಿ ಎಂದು ಸುದ್ದಿಯಾಯಿತೋ, ಮನೋಜ್ ಸೀದಾ ಟ್ವಿಟರ್‍ನಲ್ಲಿ ಅವೆಲ್ಲಾ ರಾಂಗ್ ನ್ಯೂಸ್ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ತಾವು ಆ ರೀತಿಯ ಯಾವುದೇ ಚಿತ್ರ ಅಥವಾ ಪಾತ್ರವನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. (ಏಜೆನ್ಸೀಸ್​)