ನ್ಯೂಸ್

ಗಾಂಧಿ ಕುಟುಂಬ ಟ್ರಸ್ಟ್ ಏನು? ಎತ್ತ?

ಗಾಂಧಿ ಕುಟುಂಬ ನಡೆಸುತ್ತಿರುವ ಮೂರು ಟ್ರಸ್ಟ್​ಗಳ ವಿರುದ್ಧ ಅವ್ಯವಹಾರದ ಆರೋಪ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಟ್ರಸ್ಟ್​ಗಳ ಕಾರ್ಯ ಹಾಗೂ ತನಿಖೆ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳ ವಿವರ ಇಲ್ಲಿದೆ.

ರಾಜೀವ್ ಗಾಂಧಿ ಪ್ರತಿಷ್ಠಾನ (ಆರ್​ಜಿಎಫ್): 1991ರ ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀಪೆರಂಬದೂರ್​ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಒಂದು ತಿಂಗಳಿನ ನಂತರ ಅಂದರೆ ಜೂನ್ 21ರಂದು ರಾಜೀವ್ ಗಾಂಧಿ ಪ್ರತಿಷ್ಠಾನ ಆರಂಭವಾಯಿತು. ಸಾಕ್ಷರತೆ, ಆರೋಗ್ಯ, ಅಂಗವಿಕಲರ ಕಲ್ಯಾಣ, ಅವಕಾಶ ವಂಚಿತರ ಸಬಲೀಕರಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜೀವ್ ಪತ್ನಿ ಸೋನಿಯಾ ಟ್ರಸ್ಟ್ ಅಧ್ಯಕ್ಷೆಯಾಗಿದ್ದು, ಅವರ ಮಕ್ಕಳಾದ ರಾಹುಲ್, ಪ್ರಿಯಾಂಕಾ ಜತೆಗೆ ಕಾಂಗ್ರೆಸ್​ನ ಹಿರಿಯ ಮುಖಂಡರಾದ ಮನಮೋಹನ್ ಸಿಂಗ್, ಪಿ.ಚಿದಂಬರಂ ಟ್ರಸ್ಟಿಗಳಾಗಿದ್ದಾರೆ.

ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ (ಆರ್​ಜಿಸಿಟಿ): ಈ ಟ್ರಸ್ಟ್ 2002ರಲ್ಲಿ ಕಾರ್ಯಾರಂಭ ಮಾಡಿತು. ಇದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಜನರ ಕಲ್ಯಾಣ, ಸಮುದಾಯ ಆಧಾರಿತ ಅಭಿವೃದ್ಧಿ ಕಾರ್ಯಕ್ರಮ, ಮಹಿಳಾ ಸಬಲೀಕರಣ ಮತ್ತು ಕಣ್ಣಿನ ಆರೋಗ್ಯ ಮತ್ತು ಈ ಕುರಿತು ಸಂಶೋಧನೆ ಇದರ ಧ್ಯೇಯೋದ್ದೇಶ. ಇದು ಆರ್​ಜಿಎಫ್ ಜತೆಗೆ ಸಂವಾದಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ನೀತಿ, ಸ್ಥಳೀಯ ಆಡಳಿತ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಗಳ ಚಿಂತನ -ಮಂಥನವನ್ನು ನಡೆಸುತ್ತದೆ. ಸೋನಿಯಾ ಗಾಂಧಿ ಇದರ ಅಧ್ಯಕ್ಷೆಯಾಗಿದ್ದು, ದೀಪ್ ಜೋಶಿ ಸಿಇಒ ಆಗಿದ್ದಾರೆ.

ಕಾಂಗ್ರೆಸ್ ನಾಯಕರ ಟೀಕೆ * ಚೀನಾ ವಿಷಯದಲ್ಲಿ ದೇಶದ ಭದ್ರತಾ ಹಿತಾಸಕ್ತಿ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಂಡಿದೆ. * ಕೋವಿಡ್-19 ಸೋಂಕನ್ನು ಪ್ರತಿಬಂಧಿಸಲು ಆಗದಷ್ಟು ನಿರ್ವಹಣಾ ಲೋಪದ ಕಾರಣ ನಿತ್ಯ ಜೀವಹಾನಿ ಪ್ರಮಾಣ ಏರುತ್ತಿದೆ. * ಆರ್ಥಿಕ ವಂಚಕರನ್ನು ಬಂಧಿಸಲು ತಾಕತ್ತಿಲ್ಲದ ಮೋದಿ, ಷಾ ಅವರ ಸರ್ಕಾರ ಗಾಂಧಿ ಕುಟುಂಬದ ಟ್ರಸ್ಟ್​ಗಳನ್ನು ಬೇಟೆಯಾಡುತ್ತಿದೆ. * ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಸಂಸ್ಥೆಯಾದ ಆರ್​ಎಸ್​ಎಸ್ ಸಂಗ್ರಹಿಸಿರುವ ದೇಣಿಗೆ ಬಗ್ಗೆ ತನಿಖೆ ನಡೆಸುವ ಧೈರ್ಯ ಸರ್ಕಾರಕ್ಕೆ ಇದೆಯೆ?

ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ (ಐಜಿಎಂಟಿ): 80ರ ದಶಕದ ಉತ್ತರಾರ್ಧದಲ್ಲಿ ಆರಂಭವಾದ ಈ ಟ್ರಸ್ಟ್ ದೇಶ ಮತ್ತು ವಿದೇಶಗಳ ಗಣ್ಯರನ್ನು ಒಳಗೊಂಡಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ಕಾರ್ಯಕ್ರಮ ನಡೆಸುವ ಈ ಟ್ರಸ್ಟ್ ಮುಖ್ಯವಾಗಿ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಅಥವಾ ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಯನ್ನು 1986ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಿದೆ.

ಕಾನೂನಿನ ಸಹಜ ಪ್ರಕ್ರಿಯೆ ಎಂದ ಬಿಜೆಪಿ: ಗಾಂಧಿ ಕುಟುಂಬ ಮುನ್ನಡೆಸುತ್ತಿರುವ ಟ್ರಸ್ಟ್​ಗಳ ವಿರುದ್ಧ ತನಿಖೆಯು ಕಾನೂನಿನ ಸಹಜ ಪ್ರಕ್ರಿಯೆ. ಸಾರ್ವಜನಿಕವಾಗಿ ಈ ಟ್ರಸ್ಟ್​ಗಳ ವಿರುದ್ಧ ಆರೋಪ ಕೇಳಿಬಂದಿದ್ದರಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಮತ್ತು ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪಾರದರ್ಶಕ ಆಡಳಿತದ ಭಾಗವಾಗಿಯೂ ಇದೆ ಎಂದು ಬಿಜೆಪಿ ಹೇಳಿದೆ.

ಯುಪಿಎ ಆಡಳಿತ ಅವಧಿಯಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ (ಪಿಎಂಎನ್​ಆರ್​ಎಫ್) ನೀಡಲಾಗಿದ್ದ ದೇಣಿಗೆಯನ್ನು ರಾಜೀವ್ ಗಾಂಧಿ ಟ್ರಸ್ಟ್​ಗೆ ವರ್ಗಾಯಿಸಲಾಗಿದೆ ಎಂದು ಬಿಜೆಪಿ ಕಳೆದ ತಿಂಗಳಿಂದ ಆರೋಪಿಸುತ್ತಿದೆ. ಗಾಂಧಿ ಟ್ರಸ್ಟ್​ಗಳ ಅಧ್ಯಕ್ಷೆಯಾದ ಸೋನಿಯಾ ಗಾಂಧಿಗೆ ಹೀಗೆ ಮಾಡಲು ಯಾವ ನೈತಿಕತೆ ಇದೆ? ಪಿಎಂಎನ್​ಆರ್​ಎಫ್​ಗೆ ಜನರು ನೀಡಿದ್ದ ದುಡ್ಡನ್ನು ಸ್ವಂತ ಟ್ರಸ್ಟ್​ಗೆ ಬಳಸಿಕೊಂಡಿದ್ದು ಜನತೆಗೆ ಮಾಡಿದ ದ್ರೋಹ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹರಿಹಾಯ್ದಿದ್ದರು.

ಚೀನಾ ದೂತಾವಾಸದಿಂದ 2005-06ರಲ್ಲಿ ದೇಣಿಗೆ ರೂಪದಲ್ಲಿ ಬಂದ ಲಂಚದ ಋಣ ಸಂದಾಯ ಮಾಡುವುದಕ್ಕಾಗಿಯೇ ಚೀನಾ ಜತೆಗೆ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಗಾಂಧಿ ಟ್ರಸ್ಟ್​ಗಳು ಶಿಫಾರಸು ಮಾಡಿತ್ತೆ? ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಇತ್ತೀಚೆಗೆ ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು.

ರಾಜಕೀಯ ದ್ವೇಷವೆಂದ ಕಾಂಗ್ರೆಸ್: ಈ ಮೂರೂ ಟ್ರಸ್ಟ್​ಗಳ ಲೆಕ್ಕಪತ್ರಗಳು ಆಯಾಯ ಆರ್ಥಿಕ ವರ್ಷದಲ್ಲೇ ಲೆಕ್ಕಪತ್ರ ಪರಿಶೋಧನೆಗೆ ಒಳಪಟ್ಟಿದೆ, ಯಾವುದೇ ಅಕ್ರಮ ಅಥವಾ ಕಾನೂನುಬಾಹಿರ ಕಾರ್ಯ ನಡೆದಿಲ್ಲ. ತನಿಖೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಕಳೆದ ವಾರವಷ್ಟೆ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ದೆಹಲಿ ನಿವಾಸ ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಗುರಿಯಾಗಿರಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಪಿಎಂ ಕೇರ್ಸ್ ನಿಧಿಗೆ ಚೀನಿ ಕಂಪನಿಗಳಿಂದ ದೇಣಿಗೆ ಸಂಗ್ರಹಿಸುವ ಸರ್ಕಾರಕ್ಕೆ ಮತ್ತು ಬಿಜೆಪಿಗೆ ಚೀನಾ ಸಾಮಗ್ರಿಗಳನ್ನು ಬಹಿಷ್ಕರಿಸಿ ಎಂದು ಹೇಳುವ ನೈತಿಕತೆಯಾದರೂ ಇದೆಯೇ ಎಂದು ಕಾಂಗ್ರೆಸ್ ವಕ್ತಾರರು ಕಿಡಿಕಾರಿದ್ದರು. ಸುನಾಮಿ ಅಪ್ಪಳಿಸಿದಾಗ ರಾಜೀವ್ ಗಾಂಧಿ ಪ್ರತಿಷ್ಠಾನದಿಂದ 20 ಲಕ್ಷ ರೂ.ಗಳನ್ನು ಪಿಎಂಎನ್​ಆರ್​ಎಫ್​ಗೆ ನೀಡಿರುವ ವಿಷಯವನ್ನು ಸರ್ಕಾರ ಏಕೆ ಮುಚ್ಚಿಡುತ್ತಿದೆ? ಎಂದು ಗಾಂಧಿ ಟ್ರಸ್ಟ್​ನ ಸದಸ್ಯರೂ ಆಗಿರುವ ಹಿರಿಯ ಕಾಂಗ್ರೆಸ್ಸಿಗ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.