ನ್ಯೂಸ್

ಮಗ-ಸೊಸೆ ಜೊತೆ 'ಗಂಧದಗುಡಿ' ವೀಕ್ಷಿಸಿದ ಬಿಎಸ್‌ವೈ

ಶಿವಮೊಗ್ಗ: ಸದಾ ರಾಜಕೀಯ ಜಜಾಂಟದಲ್ಲಿರುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಬಿಡುವು ಮಾಡಿಕೊಂಡು ಇಲ್ಲಿನ ಸಿಟಿ ಸೆಂಟ್ರಲ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಪವರ್‌ಸ್ಟಾರ್ ಪುನೀತ್‌ ರಾಜ್​ಕುಮಾರ್ ಅವರ ಸಾಕ್ಷ್ಯಚಿತ್ರ 'ಗಂಧದಗುಡಿ' ವೀಕ್ಷಿಸಿದರು.

ಪುತ್ರ ಬಿ.ವೈ.ರಾಘವೇಂದ್ರ ಮತ್ತು ಸೊಸೆ ತೇಜಸ್ವಿನಿ ರಾಘವೇಂದ್ರ ಅವರೊಂದಿಗೆ ಯಡಿಯೂರಪ್ಪ ಸಿನಿಮಾ ವೀಕ್ಷಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎಸ್.ಎಸ್.ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮತ್ತಿತರರು ಸಾಥ್ ನೀಡಿದರು. ಯಡಿಯೂಪ್ಪ ಅವರು ಮಾಲ್‌ಗೆ ಆಗಮಿಸುತ್ತಿದ್ದಂತೆ ಮುಖ್ಯದ್ವಾರದಲ್ಲಿ ಎದುರಾದ ಪುಟಾಣಿಯ ಕೈಕುಲುಕಿದರು. ಬಳಿಕ ಮಾಲ್ ಸಿಬ್ಬಂದಿ ಸೇರಿದಂತೆ ಗಂಧದಗುಡಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಅಪ್ಪು ಅಭಿಮಾನಿಗಳು ಯಡಿಯೂರಪ್ಪ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಬೆಳಗ್ಗೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಆಗಮಿಸುವ ವೇಳೆ ಜೆಎನ್‌ಎನ್‌ಸಿ ಕಾಲೇಜು ಬಳಿ ವಿದ್ಯಾರ್ಥಿನಿಯರ ಕೋರಿಕೆ ಮೇರೆಗೆ ಅವರೊಂದಿಗೆ ಫೋಟೋ ತೆಗೆಸಿಕೊಂಡರು.

ಗುರುವಾರ ಒಕ್ಕಲಿಗರ ಭವನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಬಂಜಾರಾ ಭವನ ವೀಕ್ಷಣೆ ಮಾಡಿದ್ದ ಅವರು ಬಿಡುವು ಮಾಡಿಕೊಂಡು ಗಂಧದಗುಡಿ ಸಾಕ್ಷ್ಯಚಿತ್ರ ವೀಕ್ಷಣೆ ಮಾಡಿದರು.