ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ಹೀರೋ ಆಗುತ್ತಿದ್ದಾರೆ ಎನ್ನುವ ವಿಷಯ ಹೊಸದೇನಲ್ಲ. ಹೊಸ ವಿಷಯವೇನೆಂದರೆ ಮಾರ್ಚ್ 4ರಂದು ಈ ಚಿತ್ರ ಪ್ರಾರಂಭವಾಗುತ್ತಿದ್ದು, ಮುಹೂರ್ತಕ್ಕೆ ‘ಬಾಹುಬಲಿ’ ಖ್ಯಾತಿಯ ಎಸ್.ಎಸ್. ರಾಜಮೌಳಿ ಆಗಮಿಸಿ ಮೊದಲ ದೃಶ್ಯಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.
ಕಿರೀಟಿ ಅಭಿನಯದ ಮೊದಲ ಚಿತ್ರವನ್ನು ‘ಬಾಹುಬಲಿ’ ನಿರ್ವಿುಸಿದ್ದ ವಾರಾಹಿ ಪ್ರೊಡಕ್ಷನ್ ಸಂಸ್ಥೆಯು ನಿರ್ವಿುಸುತ್ತಿದೆ. ಈ ಹಿಂದೆ ‘ಮಾಯಾಬಜಾರ್ 2016’ ಚಿತ್ರವನ್ನು ನಿರ್ದೇಶಿಸಿದ್ದ ರಾಧಾಕೃಷ್ಣ ಈ ಚಿತ್ರವನ್ನು ಕಥೆ ಬರೆದು ನಿರ್ದೇಶಿಸುತ್ತಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.
ವಿಶೇಷವೆಂದರೆ, ದಕ್ಷಿಣ ಭಾರತದ ಜನಪ್ರಿಯ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅಲಿಯಾಸ್ ಡಿಎಸ್ಪಿ, ‘ಬಾಹುಬಲಿ’ ಖ್ಯಾತಿಯ ಸೆಂಥಿಲ್ ಕುಮಾರ್, ಸಾಹಸ ನಿರ್ದೇಶಕ ಪೀಟರ್ ಹೇನ್ಸ್ ಮುಂತಾದವರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.