ಮುಂಬೈ: ಕಳೆದ ನಾಲ್ಕು ದಿನಗಳಿಂದ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದ್ದು, ರಜನಿಕಾಂತ್ ಅಭಿನಯದ 'ಜೈಲರ್' ಮತ್ತು ಸನ್ನಿ ಡಿಯೋಲ್ ನಟನೆಯ 'ಗದರ್ 2' ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಬಹುಸಂಖ್ಯೆಯಲ್ಲಿ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ಗದರ್ 2 ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು, ಆಗಸ್ಟ್ 15 ರಂದು ಉತ್ತಮ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಮಾಧ್ಯಮ ಸದಾ ಪ್ರತಿಪಕ್ಷದಂತೆ ಕಾರ್ಯನಿರ್ವಹಿಸಬೇಕು: ಸಿದ್ದರಾಜು, ಕೆಯುಡಬ್ಲ್ಯೂಜೆ ವತಿಯಿಂದ ’ಮನೆಯಂಗಳದಲ್ಲಿ ಮನದುಂಬಿ ನಮನ’
'ಗದರ್: ಏಕ್ ಪ್ರೇಮ್ ಕಥಾ' ಚಿತ್ರದ ಮುಂದುವರಿದ ಭಾಗವಾಗಿರುವ 'ಗದರ್ 2' ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕನಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ನತ್ತ ಸಾಗುತ್ತಿದೆ. ಆಕ್ಷನ್-ಡ್ರಾಮಾ ಜಾನರ್ನ ಈ ಸಿನಿಮಾ ಸಿನಿಪ್ರೇಕ್ಷಕರಿಗೆ ಉತ್ತಮ ಸಂದೇಶವನ್ನು ತಲುಪಿಸಿದೆ. ಸದ್ಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆಯನ್ನು ಮಾಡುತ್ತಿರುವ ಗದರ್ 2, ಬಿಡುಗಡೆಗೊಂಡ 4 ದಿನಗಳಲ್ಲಿ ಬರೋಬ್ಬರಿ 173 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆದ ಕಾರಣ ಸರ್ಕಾರಿ ರಜೆಯಿತ್ತು. ಹಾಗಾಗಿ ಈ ದಿನ ಚಿತ್ರಮಂದಿರಗಳಿಗೆ ಸಿನಿಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಈ ಹಿಂದೆಯೇ ನಿರೀಕ್ಷಿಸಲಾಗಿತ್ತು. ಇಂದು ಚಿತ್ರ ಕನಿಷ್ಠ 50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದ್ದು, ಶೀಘ್ರವೇ 200 ಕೋಟಿ ರೂ. ಗಡಿ ತಲುಪಲಿದೆ. ಅನಿಲ್ ಶರ್ಮಾ ನಿರ್ದೇಶನದ ಗದರ್ 2 ಸಿನಿಮಾಗೆ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ,(ಏಜೆನ್ಸೀಸ್).