ಹಿಂದಿನ ವಾರದಲ್ಲಿ "ಅಂಫಾನ್" ಸೈಕ್ಲೋನ್ ಆರ್ಭಟ ಜೋರಾಗಿತ್ತು. ಈ ವಾರ "ನಿಸರ್ಗ" ಸೈಕ್ಲೋನ್ನ ಆರ್ಭಟ. ನಾಳೆ ಮಹಾರಾಷ್ಟ್ರ ಮತ್ತು ಗುಜರಾತ್ನ ಕರಾವಳಿಗೆ ಅಪ್ಪಳಿಸಲಿದೆ ಈ ನಿಸರ್ಗ. ನಿನ್ನೆ ಕೇರಳಕ್ಕೆ ಮಳೆ ಪ್ರವೇಶಿಸುತ್ತಿದ್ದಾಗಲೇ ನಿಸರ್ಗ ಚಂಡಮಾರುತ ತಲ್ಲಣ ಉಂಟುಮಾಡುವ ಮುನ್ನೆಚ್ಚರಿಕೆಯೂ ಪ್ರಕಟವಾಗಿತ್ತು. ಚಂಡಮಾರುತದ ಪರಿಣಾಮ ಕೇರಳದ ಹಲವೆಡೆ ಭಾರಿ ಮಳೆಯಾಗಿದ್ದು, ಒಂಭತ್ತು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿತ್ತು. ಈ ವಿದ್ಯಮಾನದ ನಡುವೆ ಗಮನಸೆಳೆಯುವಂಥದ್ದು ಸೈಕ್ಲೋನ್ನ ಹೆಸರು. ಸೈಕ್ಲೋನ್ಗಳಿಗೆ ಹೆಸರನ್ನು ಇಡುವುದು ಯಾರು? ಹೇಗೆ ಇಡ್ತಾರೆ? ಅದಕ್ಕೇನಾದರೂ ಪ್ರಕ್ರಿಯೆ ಇದೆಯೇ? ಎಂಬ ಸಹಜ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಜಗತ್ತಿನಾದ್ಯಂತ ಇದೆಯೇ ಇಂಥ ಪದ್ಧತಿ? ಜಗತ್ತಿನಾದ್ಯಂತ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ ಚಾಲ್ತಿಯಲ್ಲಿದೆ. ಆಯಾ ರೀಜಿನಲ್ ಸ್ಪೆಷಲೈಸ್ಡ್ ಮೀಟಿಯೋರೋಲಾಜಿಕಲ್ ಸೆಂಟರ್ಗಳು ಮತ್ತು ಟ್ರಾಪಿಕಲ್ ಸೈಕ್ಲೋನ್ ವಾರ್ನಿಂಗ್ ಸೆಂಟರ್ಗಳು ಚಂಡಮಾರುತಗಳಿಗೆ ಹೆಸರಿಡುವ ಕೆಲಸ ಮಾಡುತ್ತವೆ. ಜಗತ್ತಿನಾದ್ಯಂತ ಒಟ್ಟು ಆರು ರೀಜಿನಲ್ ಸ್ಪೆಷಲೈಸ್ಡ್ ಮೀಟಿಯೋರೋಲಾಜಿಕಲ್ ಸೆಂಟರ್ಗಳು, ಭಾರತದ ಐಎಂಡಿಯೂ ಸೇರಿ ಐದು ಟ್ರಾಪಿಕಲ್ ಸೈಕ್ಲೋನ್ ವಾರ್ನಿಂಗ್ ಸೆಂಟರ್ಗಳಿವೆ. ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರ ಸೇರಿ ಉತ್ತರ ಹಿಂದು ಮಹಾಸಾಗರದಲ್ಲಿನ ಚಂಡಮಾರುತಗಳಿಗೆ ಹೆಸರಿಡುವ ಹೊಣೆಗಾರಿಕೆ ಐಎಂಡಿಯದ್ದು.
ಸದ್ಯದ ಮಾಹಿತಿ ಪ್ರಕಾರ ಅರಬ್ಬಿ ಸಮುದ್ರದಲ್ಲಿ ಭಾರಿ ವಾಯುಭಾರ ಕುಸಿತ ಉಂಟಾಗಿದ್ದು, ನಿಸರ್ಗ ಮಹಾರಾಷ್ಟ್ರ, ಗುಜರಾತ್ ಕರಾವಳಿ ಕಡೆಗೆ ಸಂಚರಿಸುತ್ತಿದೆ. ಈ ವಾಯುಭಾರ ಕುಸಿತ ಮುಂದಿನ 12 ಗಂಟೆ ತನಕ ಮುಂದುವರಿಯಲ್ಲಿದ್ದು ಚಂಡಮಾರುತ ಮತ್ತೂ 12 ಗಂಟೆ ಬಲವಾಗಿರಲಿದೆ. ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತಿನ ಕರಾವಳಿಯನ್ನು ದಾಟಿ ಮುಂದೆ ಹೋಗಲಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹರಿಹರೇಶ್ವರ ಪಟ್ಟಣ ಮತ್ತು ದಮನ್ಗಳಲ್ಲಿ ನಾಳೆ ಅಪರಾಹ್ನ ಚಂಡಮಾರುತದ ತೀವ್ರ ಪರಿಣಾಮ ಕಾಣಲಿದೆ. ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡಮಾರುತ ಈಗ ಅಬ್ಬರಿಸುತ್ತಿದೆ. ಈಗಿನ ಚಂಡಮಾರುತಕ್ಕೆ ನಿಸರ್ಗ ಎಂಬ ಹೆಸರನ್ನು ಬಾಂಗ್ಲಾದೇಶ ಶಿಫಾರಸು ಮಾಡಿದ್ದು. 2019ರ ಮೇ 3ರಂದು ಒಡಿಶಾದಲ್ಲಿ ಭೂಕುಸಿತಕ್ಕೂ ಕಾರಣವಾಗಿದ್ದ ಚಂಡಮಾರುತಕ್ಕೆ ಫಣಿ ಎಂದು ಹೆಸರಿಡುವ ಪ್ರಸ್ತಾವನೆಯನ್ನು ಮುಂದಿಟ್ಟದ್ದೂ ಬಾಂಗ್ಲಾದೇಶವೇ ಆಗಿತ್ತು. ಇದು ಭಾರಿ ಹಾನಿಯನ್ನೇ ಮಾಡಿತ್ತು.
ನಾಮಕರಣ ಶುರುವಾಗಿದ್ದೇಕೆ?
ನಾಮಕರಣಕ್ಕೂ ಒಂದು ಸಮಿತಿ
ಚಂಡಮಾರುತಗಳಿಗೆ ನಾಮಕರಣ ಮಾಡುವುದಕ್ಕೆ ಒಂದು ಸಮಿತಿ ಇದ್ದು, ಆರಂಭದಲ್ಲಿ ಅದರಲ್ಲಿ ಇದ್ದ ಸದಸ್ಯ ರಾಷ್ಟ್ರಗಳ ಸಂಖ್ಯೆ 8. ಅವುಗಳೆಂದರೆ-ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ. ನಂತರ 2018ರಲ್ಲಿ ಇರಾನ್ ಮತ್ತು ಕತಾರ್, ಸೌದಿ ಅರೇಬಿಯಾ, ಯುಎಇ, ಯುಮೆನ್ಗಳ ಸೇರ್ಪಡೆಯಾಗಿದೆ. ಹಾಗೆ ಸಮಿತಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 13ಕ್ಕೆ ಏರಿಕೆಯಾಯಿತು. ಈ ಹದಿಮೂರು ರಾಷ್ಟ್ರಗಳು ಸೈಕ್ಲೋನ್ಗೆ ಹೆಸರುಗಳನ್ನು ಸೂಚಿಸಿದ ಪ್ರಸ್ತಾವನೆಯನ್ನು ದ ಇಂಡಿಯಾ ಮೀಟಿಯೋರೋಲಾಜಿಕಲ್ ಡಿಪಾರ್ಟ್ಮೆಂಟ್(ಐಎಂಡಿ)ಗೆ ಸಲ್ಲಿಸುತ್ತವೆ. ಇದರಂತೆ, 2020ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡಿದ ಸೈಕ್ಲೋನ್ಗಳ ಹೆಸರಿನಲ್ಲಿ ಅರ್ನಬ್, ನಿಸರ್ಗ, ಅಗಾ, ವ್ಯೋಮ್, ಅಝರ್, ಪ್ರಭಂಜನ್, ತೇಜ್, ಗತಿ, ಲುಲು ಸೇರಿ 160 ಹೆಸರುಗಳಿವೆ. ಅಂಫನ್ ಹೆಸರು ಹಿಂದಿನ ಪಟ್ಟಿಯಲ್ಲಿ ಬಳಕೆಯಾಗದೇ ಉಳಿದಿತ್ತು. ಅದನ್ನು ಈ ಪಟ್ಟಿಗೆ ಸೇರಿಸಲಾಗಿತ್ತು.