ನ್ಯೂಸ್

ಇಂಧನ ಬೆಲೆ: ಮುಂಬರುವ ತಿಂಗಳಲ್ಲಿ ಕೊಂಚ ಪರಿಹಾರ ಎಂದ ಕೇಂದ್ರ ಸಚಿವ

ನವದೆಹಲಿ: ಅಂತರರಾಷ್ಟ್ರೀಯ ತೈಲ ಬೆಲೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಸುಸ್ಥಿರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಇಂಧನ ಬೆಲೆಗಳ ವಿಚಾರದಲ್ಲಿ ಜನರಿಗೆ ಸ್ವಲ್ಪ ಪರಿಹಾರ ಸಿಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಹರದೀಪ್​ ಸಿಂಗ್ ಪುರಿ ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಪುರಿ ಅವರು, ಭಾರತದಲ್ಲಿ ಇಂಧನ ಬೆಲೆಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೇ ಅವಲಂಬಿತವಾಗಿದೆ. ಪೆಟ್ರೋಲ್​-ಡೀಸೆಲ್​ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಅಬಕಾರಿ ಶುಲ್ಕ ಏಪ್ರಿಲ್ 2010 ರಿಂದ ಲೀಟರ್​ಗೆ 32 ರೂ.ಗಳಷ್ಟೇ ಇದೆ, ಯಾವುದೇ ಬದಲಾವಣೆ ಮಾಡಿಲ್ಲ ಎಂದರು.

"ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ಹೊಂದಿದೆ... ಬರುವ ತಿಂಗಳುಗಳಲ್ಲಿ ಪರಿಹಾರ ದೊರೆಯಲಿದೆ" ಎಂದ ಸಚಿವ ಪುರಿ, "ಸರ್ಕಾರ ತನ್ನ ಇತರ ಜವಾಬ್ದಾರಿಗಳ ಬಗ್ಗೆಯೂ ಕಾಳಜಿ ಹೊಂದಿದೆ... 80 ಕೋಟಿ ಜನರಿಗೆ ಸರ್ಕಾರ ಉಚಿತ ಪಡಿತರ ನೀಡಿತು, ಉಚಿತ ಲಸಿಕೆ ಮತ್ತು ಇತರ ಸೌಲಭ್ಯಗಳನ್ನು ನೀಡಿತು. ಆದ್ದರಿಂದ ಇದು ದೊಡ್ಡ ಚಿತ್ರದ ಭಾಗವಾಗಿದೆ" ಎಂದರು. (ಏಜೆನ್ಸೀಸ್)