ನ್ಯೂಸ್

ತೈಲ ಏರಿಕೆಗೆ ಕೇಂದ್ರ ಸಮರ್ಥನೆ: ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಹೆಚ್ಚಳ ಪ್ರಮುಖ ಕಾರಣ

ನವದೆಹಲಿ: ಯೂಕ್ರೇನ್-ರಷ್ಯಾ ಯುದ್ಧದ ಕಾರಣ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತಿದೆ. ಇದರಿಂದಾಗಿ ಭಾರತೀಯ ತೈಲ ಕಂಪನಿಗಳು ದರ ಹೆಚ್ಚಳ ಮಾಡಿವೆ. ಇದಕ್ಕೂ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಿದ್ದರೂ ದೇಶದಲ್ಲಿ 137 ದಿನ ದರ ಪರಿಷ್ಕರಣೆ ಆಗಿರಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದರು.

ಮಾರ್ಚ್ 9ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ 128.40 ಡಾಲರ್​ಗೆ ಮುಟ್ಟಿದ್ದರೂ ದೇಶದಲ್ಲಿ ಬೆಲೆ ಹೆಚ್ಚಳ ಮಾಡಿರಲಿಲ್ಲ. ಅಷ್ಟುಹೊತ್ತಿಗೆ ಐದು ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಮಾತ್ರ ಬಾಕಿತ್ತು. ದೇಶದಲ್ಲಿ ತೈಲ ಪರಿಷ್ಕರಣೆ ಮತ್ತೆ ಶುರುವಾಗಿದ್ದು, ಮಾರ್ಚ್ 22ರಿಂದ. ಈ ಎಂಟು ದಿನಗಳಲ್ಲಿ 4.80 ರೂ. ಏರಿಕೆ ಕಂಡಿದೆ ಎಂದು 2022-23ನೇ ಸಾಲಿನ ಹಣಕಾಸು ವಿಧೇಯಕ ಮೇಲಿನ ಚರ್ಚೆ ವೇಳೆ ನಿರ್ಮಲಾ ತಿಳಿಸಿದರು.

ಇಂಧನ ತೈಲ ದರ ಏರಿಸಲು ಸರ್ಕಾರ ಯೂಕ್ರೇನ್-ರಷ್ಯಾ ಯುದ್ಧವನ್ನು ನೆಪ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷಗಳ ಆಪಾದನೆಯನ್ನು ತಳ್ಳಿಹಾಕಿದ ಸಚಿವೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಅನ್ವಯ ದರ ಪರಿಷ್ಕರಣೆ ಆಗುತ್ತದೆ ಎಂದರು. ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಕಡಿಮೆ ಬೆಲೆಗೆ ತೈಲ ಮತ್ತು ಅಡುಗೆ ಅನಿಲ ಮಾರಾಟ ಮಾಡಿದ್ದರಿಂದ ಉಂಟಾದ ನಷ್ಟವನ್ನು ಭರಿಸಿಕೊಡಲು ಯುಪಿಎ ಸರ್ಕಾರ ತೈಲ ಕಂಪನಿಗಳಿಗೆ ಬಾಂಡ್ ನೀಡಿತು. ಇದರ ಪರಿಣಾಮವನ್ನು ಈಗಲೂ ಎದುರಿಸುತ್ತಿದ್ದೇವೆ. 2 ಲಕ್ಷ ಕೋಟಿ ರೂ. ಭರಿಸಿಕೊಡಲು ತೆರಿಗೆದಾರರು ಇನ್ನು ಐದು ವರ್ಷ ಏಗಬೇಕಾದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ದೂಷಿಸಿದರು. ಇದಕ್ಕೆ ಪ್ರತ್ಯುತ್ತ ನೀಡಿದ ಕಾಂಗ್ರೆಸ್ ಸಂಸದರು, ತೈಲ ಕಂಪನಿಗಳಿಗೆ ಮೊದಲು ಬಾಂಡ್ ವಿತರಿಸಿದ್ದು ಎನ್​ಡಿಎ ಸರ್ಕಾರ. 1999ರಿಂದ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ 9 ಸಾವಿರ ಕೋಟಿ ರೂ. ಬಾಂಡ್ ನೀಡಿತ್ತು ಎಂದರು. ಇದಕ್ಕೆ ತಿರುಗೇಟು ನೀಡಿದ ನಿರ್ಮಲಾ, ವಾಜಪೇಯಿ ಸರ್ಕಾರ ಒಮ್ಮೆ ಮಾತ್ರ ಇಂಥ ಬಾಂಡ್ ನೀಡಿತ್ತು. ಆದರೆ, ಯುಪಿಎ ಅವಧಿಯಲ್ಲಿ ಇದು ಚಾಳಿಯಾಯಿತು. 9 ಸಾವಿರ ಕೋಟಿ ರೂಪಾಯಿಗೂ 2 ಲಕ್ಷ ಕೋಟಿ ರೂಪಾಯಿಗೂ ವ್ಯತ್ಯಾಸ ತಿಳಿಯುವುದಿಲ್ಲವೆ ಎಂದು ಪ್ರಶ್ನಿಸಿದರು.

ಪೆಟ್ರೋಲ್ 80, ಡೀಸೆಲ್ 70 ಪೈಸೆ ಏರಿಕೆ

ಇಂಧನಗಳ ಬೆಲೆಗಳಲ್ಲಿ ಮಂಗಳವಾರವೂ ಏರಿಕೆಯಾಗಿದ್ದು ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 80 ಪೈಸೆ ಹಾಗೂ ಡೀಸೆಲ್​ನಲ್ಲಿ 70 ಪೈಸೆ ಹೆಚ್ಚಳವಾಗಿದೆ. ಈ ಏರಿಕೆಯೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಒಂದರ 100.21 ರೂಪಾಯಿ ಹಾಗೂ ಡೀಸೆಲ್ ಬೆಲೆ 91.47 ರೂಪಾಯಿ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ತಿಳಿಸಿವೆ. ಇದು ಎಂಟು ದಿನಗಳಲ್ಲಿ ಏಳನೇ ಏರಿಕೆಯಾಗಿದ್ದು ಉಭಯ ಇಂಧನಗಳ ಬೆಲೆ ಒಂದು ವಾರದಲ್ಲಿ ಒಟ್ಟು 4.80 ರೂಪಾಯಿ ತುಟ್ಟಿಯಾಗಿದೆ. ಮಾರ್ಚ್ 22ರಂದು ತಲಾ 80 ಪೈಸೆ ಹೆಚ್ಚಳದೊಂದಿಗೆ ಬೆಲೆಯೇರಿಕೆ ಪರ್ವ ಆರಂಭವಾಗಿತ್ತು. ನಾಲ್ಕು ದಿನ ತಲಾ 80 ಪೈಸೆ ಏರಿಕೆ ಮಾಡಲಾಗಿದ್ದು 2017ರ ದೈನಿಕ ಬೆಲೆ ಪರಿಷ್ಕರಣೆ ಪದ್ಧತಿ ಜಾರಿ ನಂತರ ನಂತರ ಅದೇ ಅತಿ ಹೆಚ್ಚಿನ ದರ ಏರಿಕೆಯಾಗಿತ್ತು.

1,205 ಯೋಧರ ಆತ್ಮಹತ್ಯೆ: ಕಳೆದ ಒಂದು ದಶಕದಲ್ಲಿ ಅರೆಸೇನಾ ಪಡೆಗಳ 1,205 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದು, 2021ರಲ್ಲಿ 156 ಮಂದಿ ಈ ರೀತಿ ಸಾವನ್ನಪ್ಪಿರುವುದು ಸಾಲಿನ ಗರಿಷ್ಠವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ಕೌಟುಂಬಿಕ, ಅನಾರೋಗ್ಯ, ಹಣಕಾಸು ಸಮಸ್ಯೆಯ ಕಾರಣ ಯೋಧರು ಆತ್ಮಹತ್ಯೆ ಕಾರಣಗಳಲ್ಲಿ ಪ್ರಮುಖವಾದುದು ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಎಫ್​ಡಿಐ ಶೇ. 65 ಹೆಚ್ಚಳ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಂತರ 37.83 ಲಕ್ಷ ಕೋಟಿ ರೂ. ಎಫ್​ಡಿಐ ಭಾರತಕ್ಕೆ ಹರಿದುಬಂದಿದೆ. ಇದು ಹಿಂದಿನ ದಶಕಕ್ಕೆ ಹೋಲಿಸಿದರೆ ಶೇ. 65ರಷ್ಟು ಅಧಿಕ. ಜಾಗತಿಕ ಮಟ್ಟದಲ್ಲಿ ಎಫ್​ಡಿಐ ಆಕರ್ಷಿಸಿದ ಮೊದಲ ಐದು ರಾಷ್ಟ್ರಗಳ ಪೈಕಿ ಭಾರತವೂ ಇದೆ ಎಂದು ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಹೇಳಿದರು.

ಟ್ರೇಡ್ ಮಾರ್ಜಿನ್ ನಿಗದಿ: ಕ್ಯಾನ್ಸರ್ ಶಮನಕ್ಕೆ ಬಳಸುವ 40 ದುಬಾರಿ ಔಷಧಗಳ ಟ್ರೇಡ್ ಮಾರ್ಜಿನ್ ಅನ್ನು ನಿಗದಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಮನಸುಖ್ ಮಾಂಡವೀಯ ರಾಜ್ಯಸಭೆಗೆ ತಿಳಿಸಿದರು. ಕ್ಯಾನ್ಸರ್​ಗೆ ಬಳಸುವ ಔಷಧಗಳನ್ನು ಮೊದಲು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಪಿಎಲ್​ಐ ಯೋಜನೆಯಡಿ ಭಾರತದಲ್ಲೇ ತಯಾರಿಸಲಾಗುತ್ತಿದೆ. ಆದರೂ 44 ಮೆಡಿಸಿನ್​ಗಳು ದುಬಾರಿಯಾಗಿವೆ. ಹೀಗಾಗಿ ಅವರು ಟ್ರೇಡ್ ಮಾರ್ಜಿನ್ ನಗದಿಗೊಳಿಸಲಾಗಿದೆ ಎಂದರು.

ಎಂಎಸ್​ಪಿ ಸಮಿತಿ ರಚನೆ: ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಕುರಿತ ಸಮಿತಿ ರಚನೆಯು ಪ್ರಕ್ರಿಯೆಯ ಹಂತದಲ್ಲಿ ಇದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಮಾಹಿತಿ ನೀಡಿದರು. ಕಳೆದ ನವೆಂಬರ್​ನಲ್ಲಿ ಮೂರು ಕೃಷಿ ಕಾಯ್ದೆ ಹಿಂಪಡೆಯುವ ವೇಳೆಯಲ್ಲಿ ಪ್ರಧಾನಿ ಮೋದಿಯವರು ಎಂಎಸ್​ಪಿ ವ್ಯವಸ್ಥೆಯನ್ನು ಮತ್ತಷ್ಟು ದಕ್ಷ ಹಾಗೂ ಪಾರದರ್ಶಕಗೊಳಿಸುವ ಭರವಸೆ ನೀಡಿದ್ದರು. ಶೂನ್ಯ ಬಂಡವಾಳ ಕೃಷಿ ಕುರಿತು ಹೇಳಿದ್ದರು. ಈ ಕುರಿತು ಸಮಿತಿ ರಚನೆಯು ಪ್ರಕ್ರಿಯೆಯಲ್ಲಿ ಇದೆ ಎಂದು ತೋಮರ್ ತಿಳಿಸಿದರು.

ಖಾಸಗೀಕರಣ ಕೈಬಿಡಲು ಒತ್ತಾಯ: ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದ ವಿರೋಧ ಪಕ್ಷಗಳು, ಕಾರ್ವಿುಕ ಸಂಘಟನೆಗಳನ್ನು ಬೆಂಬಲಿಸಿದವು. ಲೋಕಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದ ಸುಗತಾ ರಾಯ್, ಕಾರ್ವಿುಕರ ಮುಷ್ಕರಕ್ಕೆ ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ದೊರಕಿದೆ. ಇದರಿಂದ ಸರ್ಕಾರದ ನೀತಿಗಳ ಬಗ್ಗೆ ಜನರು ವ್ಯಾಪಕವಾಗಿ ಅಸಂತುಷ್ಟರಾಗಿದ್ದಾರೆಂಬುದು ಗೊತ್ತಾಗುತ್ತದೆ. ಹೀಗಾಗಿ ಜ್ವಲಂತ ವಿಷಯಗಳಾದ ಬೆಲೆ ಏರಿಕೆ, ತೈಲ ದರ ಹೆಚ್ಚಳ ಕುರಿತು ಸದನದಲ್ಲಿ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ಸಂಸತ್​ಗೆ ಸರ್ಕಾರದ ಉತ್ತರ

  • ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ ವಿಶೇಷ ಸ್ಥಾನಮಾನ ತೆಗೆದ ನಂತರ ಅನ್ಯ ರಾಜ್ಯದ 34 ಮಂದಿ ಅಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ.
  • 2016ರಿಂದ 2020ರವರೆಗೆ ದೇಶದಲ್ಲಿ 3,400 ಕೋಮು ಗಲಭೆಗಳು ಸಂಭವಿಸಿವೆ. ಈ ಸಂಬಂಧ 2.76 ಲಕ್ಷ ಪ್ರಕರಣಗಳ ದಾಖಲಾಗಿವೆ.