ನ್ಯೂಸ್

ಕರೊನಾ ಸೋಂಕಿತರು ಹೆಚ್ಚಿರುವ ಪ್ರದೇಶದಲ್ಲಿ ಸಾವಿನ ಕದ ತಟ್ಟಿದ ಹಣ್ಣಿನ ವ್ಯಾಪಾರಿ!

ಕಲಬುರಗಿ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಮೋಮಿನಪುರ ಪ್ರದೇಶದ ಬಡ ವ್ಯಾಪಾರಿಯೊಬ್ಬರು ಲಾಕ್​ಡೌನ್​ನಿಂದ ವಹಿವಾಟು ನಡೆಯದೆ, ಅತ್ತ ಸಾಲ ತೀರಿಸಲೂ ಆಗದೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಬ್ದುಲ್ ಖದೀರ್ (32) ಆತ್ಮಹತ್ಯೆ ಮಾಡಿಕೊಂಡವ. ಸಾಲ ಮಾಡಿ ಸಗಟು ವರ್ತಕರಿಂದ ಖರೀದಿಸುತ್ತಿದ್ದ ಹಣ್ಣುಗಳನ್ನು ನಿತ್ಯ ಮಾರಾಟ ಮಾಡುತ್ತಿದ್ದರು. ಈ ಮೂಲಕ ಬಂದ ಆದಾಯದಲ್ಲಿ ಸಂಸಾರದ ಬಂಡಿ ಎಳೆಯುವ ಜತೆಗೆ ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಜಿಲ್ಲೆಗೆ ಕರೊನಾ ಎಂಟ್ರಿಯಾಗುತ್ತಿದ್ದಂತೆ ಜನಸಂಚಾರ ಮಾತ್ರವಲ್ಲ, ವ್ಯಾಪಾರ ವಹಿವಾಟು ಕೂಡ ಸ್ತಬ್ಧವಾಯಿತು. ಇನ್ನು ಸೋಂಕಿತರ ಸಂಖ್ಯೆ ಹೆಚ್ಚಿರುವ ಮೋಮಿನಪುರ ಪ್ರದೇಶದಲ್ಲಿ ಎಲ್ಲ ವ್ಯಾಪಾರ ವಹಿವಾಟು ದಿಢೀರ್ ಸ್ಥಗಿತಗೊಂಡಿತು.

ಮೋಮಿನಪುರ ಪ್ರದೇಶದಲ್ಲೇ ಇದ್ದ ಅಬ್ದುಲ್ ಖದೀರ್, ಹಣ್ಣು ಮಾರಲಾಗದೆ ಕಣ್ಣೆದುರೇ ಕೊಳೆತು ಹೋಗುವುದನ್ನು ನೋಡಿ ಕಂಗಾಲಾಗಿದ್ದರು. ಇನ್ನೊಂದೆಡೆ ಸಾಲ ತೀರಿಸಲು ದಿಕ್ಕುತೋಚದೆ ಬುಧವಾರ ರಾತ್ರಿ ಸಾವಿನ ಕದ ತಟ್ಟಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಸಂತ್ರಸ್ಥ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬಡಾವಣೆಯ ಪ್ರಮುಖರು ಅಗ್ರಹಿಸಿದ್ದಾರೆ.