ನ್ಯೂಸ್

ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಪ್ರಾಚೀನ ಕಾಲದ 1,700 ವೈರಸ್‌ ಪತ್ತೆ! ಮನುಷ್ಯರಿಗೆ ಕಾದಿದೆ ಅಪಾಯ?

ನವದೆಹಲಿ: ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಪ್ರಾಚೀನ ಕಾಲದ ಸುಮಾರು 1,700 ವೈರಸ್‌ಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಗುಲಿಯಾ ಹಿಮನದಿಯಲ್ಲಿ ಈ ಪ್ರಾಚೀನ ವೈರಲ್​ ಡಿಎನ್‌ಎ ಕಂಡುಬಂದಿದ್ದು, ಭೂಮಿಯ ಹವಾಮಾನ ಇತಿಹಾಸದ ಮೇಲೆ ಇದು ಬೆಳಕು ಚೆಲ್ಲುತ್ತದೆ.

ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಐಸ್ ಕೋರ್ ಮಾದರಿಗಳಲ್ಲಿ ಸುಮಾರು 1,700 ವೈರಸ್​ ಜಾತಿಗಳನ್ನು ಗುರುತಿಸಿದ್ದಾರೆ. ಅವರ ಅಧ್ಯಯನ ವರದಿಯು ನೇಚರ್ ಜಿಯೋಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ.

ವಾಯುವ್ಯ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ 20,000 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಗುಲಿಯಾ ಹಿಮನದಿಯ ಬಹುತೇಕ ಮೂರು ಭಾಗಗಳು ವೈಜ್ಞಾನಿಕ ಜಗತ್ತಿಗೆ ತಿಳಿದಿಲ್ಲ. ಆದರೆ ಮನುಷ್ಯ ಮತ್ತು ಭೂಮಿಯ ಇತಿಹಾಸವನ್ನು ಹೇಳಬಲ್ಲ ಹಲವು ಅಂಶಗಳು ಅಲ್ಲಿವೆ ಎಂಬ ಅಂಶದ ಮೇಲೆ ಹೊಸ ಆವಿಷ್ಕಾರ ಬೆಳಕು ಚೆಲ್ಲಿದೆ.

ಸಂಶೋಧಕರು ಹಿಮನದಿಯಿಂದ ಕೊರೆಯಲಾದ ಐಸ್ ಕೋರ್​ಗಳನ್ನು ವಿಶ್ಲೇಷಿಸಿ, 41,000 ವರ್ಷಗಳ ಹಿಂದೆ ಶೀತ-ಬೆಚ್ಚಗಿನ ಪರಿವರ್ತನೆಯ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಸೂಕ್ಷ್ಮಜೀವಿಗಳ ಸ್ನ್ಯಾಪ್‌ಶಾಟ್‌ಗಳನ್ನು ಒದಗಿಸುವ ಡಿಎನ್​ಎ ತುಣುಕುಗಳನ್ನು ವಿಜ್ಞಾನಿಗಳು ಪುನರ್​ರಚಿಸಿದ್ದಾರೆ.

ಪ್ರಮುಖ ಲೇಖಕ ಝಿಪಿಂಗ್ ಝಾಂಗ್ ಈ ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು. ಭೂಮಿಯ ಹವಾಮಾನದಲ್ಲಿನ ದೊಡ್ಡ-ಪ್ರಮಾಣದ ಬದಲಾವಣೆಗಳಿಗೆ ವೈರಸ್‌ಗಳು ಹೇಗೆ ಸಂಬಂಧಿಸಿವೆ ಎಂಬುದನ್ನು ಈವರೆಗೂ ಹೆಚ್ಚಾಗಿ ತನಿಖೆ ಮಾಡಲಾಗಿಲ್ಲ. ಈ ವೈರಸ್​ಗಳಿಂದ ಸಂಶೋಧನೆಗೆ ಸಹಕಾರಿಯಾಗಲಿವೆ. ಈ ಪುರಾತನ ವೈರಸ್‌ಗಳು ಸುಪ್ತ ಮತ್ತು ಮಾನವರಿಗೆ ಹಾನಿಕಾರವಲ್ಲ. ಇವುಗಳು ವಿಪರೀತ ಪರಿಸರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ.

ಈ ವೈರಸ್​ಗಳು 11,500 ವರ್ಷಗಳ ಹಿಂದಿನವು. ಈ ವೈರಸ್ ಸಮುದಾಯವು ಕಳೆದ ಹಿಮಯುಗದಿಂದ ಬೆಚ್ಚಗಿನ ಅವಧಿಗೆ ಪರಿವರ್ತನೆಯ ಸಮಯದಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳು ಕರಗುತ್ತಿವೆ. ಇವು ಲಕ್ಷಾಂತರ ಸೂಕ್ಷ್ಮಾಣುಜೀವಿಗಳನ್ನು ಹೊಂದಿದ್ದು, ಅವುಗಳ ಡಿಎನ್​ಎ ತುಣುಕುಗಳನ್ನು ಸಂಗ್ರಹಿಸಲು ವೈಜ್ಞಾನಿಕ ಜಗತ್ತು ಸಿದ್ಧತೆ ನಡೆಸುತ್ತಿದೆ. ಇವು ಹವಾಮಾನ ಬದಲಾವಣೆ ಮತ್ತು ಭೂಮಿಯ ಮೇಲಿನ ಜೀವನದ ಬಗ್ಗೆ ಹೆಚ್ಚಿನ ಒಳನೋಟವನ್ನು ನೀಡಬಲ್ಲವು. ಅಲ್ಲದೆ, ಭವಿಷ್ಯದ ಪರಿಸರ ವ್ಯವಸ್ಥೆಯ ಗ್ಲೋಬಲ್​ ವಾರ್ಮಿಂಗ್‌ಗೆ ಆಧುನಿಕ ವೈರಸ್‌ಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಊಹಿಸಲು ಸಹ ಸಹಾಯ ಮಾಡಬಹುದು ಎಂದು ಅಧ್ಯಯನವು ಹೇಳುತ್ತದೆ. (ಏಜೆನ್ಸೀಸ್​)