ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವೈಮನಸ್ಯ, ಬಣಗಾರಿಕೆ ಬದಿಗಿಟ್ಟು ರಾಜ್ಯ ಬಿಜೆಪಿಯಲ್ಲಿನ ಸಂಘಟನಾತ್ಮಕ ಬಂಧ ಬಿಗಿಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಸಂಘ ಹಣೆದ ಅನುಬಂಧ ಸೂತ್ರ ನಿರೀಕ್ಷೆಯಂತೆ ರಾಜ್ಯ ನಾಯಕತ್ವದ ಮೇಲೆ ನಿರೀಕ್ಷಿತ ಪರಿಣಾಮ ಬೀರಿದೆ. ಪರಸ್ಪರ ಬಹಿರಂಗ ದೋಷಾರೋಪ ನಿಲ್ಲಿಸಬೇಕು ಎಂಬ ತಾಕೀತಿನ ಜತೆಯಲ್ಲೇ ರಾಜ್ಯ ಸರ್ಕಾರದ ವಿರುದ್ಧ ಒಂದಾಗಿ ಹೋರಾಟ ಮಾಡಲು ಗುರುವಾರ ನಡೆದ ಆರ್ಎಸ್ಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ದೃಢ ಸಂಕಲ್ಪ ಕೈಗೊಳ್ಳಲಾಗಿದೆ. ಸಂವಹನ, ಸಂಪರ್ಕ, ಒಗ್ಗಟ್ಟಿನ ಮಂತ್ರ ಬೋಧಿಸಿದ ಸಮನ್ವಯ ಬೈಠಕ್ ಕಾರ್ಯತಂತ್ರದ ಬಗ್ಗೆ ಬಹುತೇಕ ನಾಯಕರು ಸಂತೃಪ್ತರಾಗಿದ್ದಾರೆ. ಜತೆಗೆ ಸಕಾರಾತ್ಮಕ ಬೆಳವಣಿಗೆ ಸಂಕೇತ ಸಂಘಟನಾ ಕಾರ್ಯಪಡೆಗೆ ತಲುಪಿದೆ. ಅದೇ ಕಾಲಕ್ಕೆ ಸಮಸ್ಯೆ ಬಗೆಹರಿಸಿ ಎಲ್ಲವನ್ನೂ ಸರಿಪಡಿಸುವ, ಸರಿದೂಗಿಸುವ ತಾಕತ್ತು ‘ಸಂಘ’ಕ್ಕಿದೆ. ಪಕ್ಷದ ಮೇಲೂ ‘ಹಿಡಿತ’ವಿದೆ ಎಂಬ ಸ್ಪಷ್ಟ ಸಂದೇಶವನ್ನೂ ಈ ಬೈಠಕ್ ರವಾನಿಸಿದೆ. ಸದಾಶಿವ ನಗರದ ರಾಷ್ಟ್ರೆೊತ್ಥಾನ ಯೋಗ ಕೇಂದ್ರದಲ್ಲಿ ಐದೂವರೆ ತಾಸು ಸಮನ್ವಯ ಬೈಠಕ್ ನಡೆಯಿತು. ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ ಕೊಟ್ಟಿದ್ದರಿಂದ ಕೆಲವರ ಏರು ಧ್ವನಿಯ ಮಾತುಗಳಿಗೂ ಸಭೆ ಸಾಕ್ಷಿಯಾಯಿತು ಎಂದು ತಿಳಿದು ಬಂದಿದೆ.
ವ್ಯಕ್ತಿ ಪೂಜೆ, ಸವಾರಿ ಸಲ್ಲ: ಸಂಘದ ನಾಯಕರು ಆಗಾಗ್ಗೆ ಮಧ್ಯೆ ಪ್ರವೇಶಿಸಿ ಒಳ್ಳೆಯ ವಾತಾವರಣದಲ್ಲಿ ಚರ್ಚೆಯಾಗಿ ಸಣ್ಣ ಪುಟ್ಟ ವೈಮನಸ್ಯ ಮರೆತು ಮುಂದೆ ಸಾಗಬೇಕು ಎಂಬ ಸಂದೇಶ ನೀಡುವುದು ಬೈಠಕ್ ಉದ್ದೇಶವಾಗಿತ್ತು. ಇದಕ್ಕಾಗಿ ಪ್ರತಿಯೊಬ್ಬರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಲಾಗಿತ್ತು. ವೈಯಕ್ತಿಕ ಪ್ರತಿಷ್ಠೆ, ಸಮಸ್ಯೆಗಳಿಗೆ ಪಕ್ಷದ ಸಂಘಟನಾ ಬಲ ಕುಂದುವಂತೆ ಮಾಡಬಾರದು ಎನ್ನುವ ಸಲಹೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರೆಂದು ತಿಳಿದು ಬಂದಿದೆ.
‘ಒಳಗೊಂದು, ಹೊರಗೊಂದು ರೀತಿಯಲ್ಲಿ ವರ್ತಿಸುತ್ತಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಕೆಲವು ನಾಯಕರು ದೂರಿದರೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಿದ್ಧ, ವರಿಷ್ಠರ ಸೂಚನೆಯನ್ನು ಉಲ್ಲಂಘಿಸಿಲ್ಲ. ಪಕ್ಷದ ವೇದಿಕೆಯಲ್ಲೇ ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಸಮಜಾಯಿಷಿ ನೀಡಿದರು. ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಜಾಗವಿಲ್ಲ, ಸಾಮೂಹಿಕ ನಾಯಕತ್ವದಲ್ಲಿ ಹೋಗಬೇಕು. ಹಾಗೆಯೇ ಹೊಣೆ ಹೊತ್ತವರ ಮೇಲೆ ಸವಾರಿ ಮಾಡುವುದಕ್ಕೂ ಅವಕಾಶವಿಲ್ಲ ಎಂದು ಸಂಘದ ನಾಯಕರು ಖಡಕ್ ಆಗಿ ಹೇಳಿದರು ಎನ್ನಲಾಗಿದೆ.
ಪಕ್ಷದ ವೇದಿಕೆಯಲ್ಲೇ ಎಲ್ಲ ತೀರ್ವನಗಳಾಗಬೇಕು. ಏನೇ ಸಮಸ್ಯೆಯಿದ್ದರೂ ಪಕ್ಷದ ವೇದಿಕೆಯಲ್ಲಿ ರ್ಚಚಿಸಿ ಬಗೆಹರಿಸಿಕೊಂಡು, ಪರಸ್ಪರ ಸಮನ್ವಯ ಸಾಧಿಸಬೇಕು ಎಂದು ಪಾಠ ಮಾಡಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆಯೂ ವಿಚಾರ ವಿಮರ್ಶೆಯಾಗಿದೆ. ಅತಿಯಾದ ಆತ್ಮವಿಶ್ವಾಸ, ಕ್ಷೇತ್ರಮಟ್ಟದಲ್ಲಿ ಅಸರ್ಮಪಕ ಕೆಲಸಗಳು, ಕಾರ್ಯಸಾಧುವಲ್ಲದ ಪ್ರಯೋಗಗಳು, ಆರ್ಎಸ್ಎಸ್ ಸಲಹೆ ಕಡೆಗಣನೆ ಹಿನ್ನಡೆಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ.
ಸಭೆಗೆ ಕಾಂಗ್ರೆಸ್ ಲೇವಡಿ: ಹರಿದ ಬಟ್ಟೆ ಹೊಲಿಯಬಹುದು, ಒಡೆದ ಮಡಿಕೆ ಜೋಡಿಸಲು ಸಾಧ್ಯವೇ ಎಂದು ಬಿಜೆಪಿ ಸಭೆ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ. ಹೆಸರಿಗಷ್ಟೇ ಸಂಧಾನ ಸಭೆ. ಅಸಲಿಗೆ ಇದು ವಿಜಯೇಂದ್ರಗೆ ಮೂಗುದಾರ ಹಾಕುವ ಕಾರ್ಯಕ್ರಮ ಎಂದು ಟೀಕಿಸಿದೆ.
ಗುರುತರ ಹೊಣೆಗಾರಿಕೆ ನೆನಪಿಸಿ ಕಿವಿಮಾತು: ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದರೆ, ಕಾರ್ಯಕರ್ತರಲ್ಲಿ ಹುರುಪು ಹೆಚ್ಚುತ್ತದೆ. ಆಡಳಿತ ಪಕ್ಷದ ಲೋಪಗಳ ವಿರುದ್ಧ ಜನರ ಧ್ವನಿಯಾಗಿ ಕೆಲಸ ಮಾಡುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ. ಆಡಳಿತ ಪಕ್ಷದಂತೆ, ಪ್ರತಿಪಕ್ಷದ ನಡವಳಿಕೆಯನ್ನು ಜನರು ಗಮನಿಸುತ್ತಾರೆ ಎಂಬ ಸೂಕ್ಷ್ಮತೆಯನ್ನು ಮರೆಯಬಾರದು ಎಂದು ಸಂಘದ ಪ್ರಮುಖರು ಕಿವಿಮಾತು ಹೇಳಿದರು ಎನ್ನಲಾಗಿದೆ. ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆ ಎನ್ನುವ ಪಕ್ಷದ ತತ್ವ ಬೋಧಿಸುವುದಕ್ಕೆ ಮಾತ್ರವಲ್ಲ, ಪಾಲಿಸುವುದಕ್ಕೂ ಇದೆ. ಪರಸ್ಪರ ಮುನಿಸು ಮರೆತು ಶಿಸ್ತು, ಒಗ್ಗಟ್ಟಿನಿಂದ ಸಂಘಟನೆ ಬಲಪಡಿಸಲು ಶ್ರಮಿಸುವುದಕ್ಕೆ ಸಮನ್ವಯ ಬೈಠಕ್ನಲ್ಲಿ ಒಮ್ಮತ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ, ಸಂಘದ ಸಹಕಾರ್ಯವಾಹ ಸಿ.ಆರ್.ಮುಕುಂದ,
ಪ್ರಮುಖರಾದ ತಿಪ್ಪೇಸ್ವಾಮಿ, ಸುಧೀರ್, ಕೇಂದ್ರ ಸಚಿವರು, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದ, ಶಾಸಕರು, ಮಾಜಿ ಸಂಸದ-ಶಾಸಕ ಸೇರಿ 40ಕ್ಕೂ ಹೆಚ್ಚು ಮುಖಂಡರು ಇದ್ದರು.
ಕೋರ್ ಕಮಿಟಿ ಪುನರ್ ರಚನೆ : ರಾಜ್ಯ ಕೋರ್ ಕಮಿಟಿಯಲ್ಲಿ ಬೆರಳೆಣಿಕೆಯಷ್ಟು ಪ್ರಮುಖರೇ ಸೇರಿಕೊಂಡು ತೀರ್ವನಿಸುವ ಸ್ಥಿತಿಯಿದೆ. ಇದರಿಂದಾಗಿ ನೀತಿ-ನಿರೂಪಣೆ, ಸಂಘಟನಾ ತಂತ್ರಗಾರಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಆದಷ್ಟು ಬೇಗ ರಾಜ್ಯ ಕೋರ್ ಕಮಿಟಿ ಪುನರ್ ರಚಿಸಬೇಕು ಎಂಬ ಅಭಿಪ್ರಾಯಗಳಿಗೆ ಸಂಘದ ಪ್ರಮುಖರು ಸಹಮತ ವ್ಯಕ್ತಪಡಿಸಿದರೆಂದು ತಿಳಿದಿದೆ.
* ಪ್ರತಿಯೊಬ್ಬರಿಗೆ ಮಾತನಾಡಲು ಅವಕಾಶ
* ವರಿಷ್ಠರ ಸೂಚನೆಗೆ ಬದ್ಧ ಎಂದ ವಿಜಯೇಂದ್ರ
* ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಾಗ್ದಾನ
* ಹೊಣೆ ಹೊತ್ತವರ ಮೇಲೆ ಸವಾರಿಗಿಲ್ಲ ಅವಕಾಶ
* ಮುಂದೆ ಹೋರಾಟ ಕೈಗೊಳ್ಳುವಾಗ ಆರೆಸ್ಸೆಸ್ ಜತೆ ಚಚಿಸಬೇಕು
* ಬಿಜೆಪಿ ವೈಚಾರಿಕ ವಿರೋಧಿ ಮನೋಭಾವ ಸೃಷ್ಟಿ ವಿರುದ್ಧ ಜಾಗೃತೆ
* ರಾಜ್ಯ, ದೇಶ-ವಿದೇಶಗಳಲ್ಲಿನ ಪ್ರಯತ್ನ ಎದುರಿಸಲು ಆದ್ಯತೆ
* ಮತ್ತೊಂದು ಪಾದಯಾತ್ರೆ ಬಗ್ಗೆ ವರಿಷ್ಠರ ಮಾರ್ಗದರ್ಶನ
* ರಾಜ್ಯ, ಜಿಲ್ಲಾಮಟ್ಟದ ಕೆಲವು ಪದಾಧಿಕಾರಿಗಳ ಬದಲಾವಣೆ
* ನಿಷ್ಕ್ರಿಯಗೊಂಡಿರುವ ಮಂಡಲಗಳ ಪುನಾರಚನೆಗೆ ತೀರ್ಮಾನ
ಮನಸ್ಸಿನಲ್ಲಿದ್ದುದನ್ನು ಮಾತನಾಡಲು ಎಲ್ಲರಿಗೂ ಅವಕಾಶ ಕೊಟ್ಟರು. ಒಳ್ಳೆಯ ವಾತಾವರಣದಲ್ಲಿ ನಡೆದ ಚರ್ಚೆಯಿಂದ ಖುಷಿಯಾಗಿದೆ. ಪಕ್ಷ ಹೇಳಿದ ಮೇಲೆ ಎಲ್ಲರೂ ಒಟ್ಟಿಗೆ ಹೋಗಬೇಕು, ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. | ಬಸನಗೌಡ ಪಾಟೀಲ ಯತ್ನಾಳ್ ಶಾಸಕ