ನ್ಯೂಸ್

ಅತ್ಯಾಚಾರ ಹೋಲುವ ರೀತಿ ತೃತೀಯ ಲಿಂಗಿಯ ಜತೆ ಲೈಂಗಿಕ ಕ್ರಿಯೆ: ಕಾಂಗ್ರೆಸ್​ ಶಾಸಕನಿಗೆ ಎದುರಾಯ್ತು ಸಂಕಷ್ಟ! Congress MLA

Congress MLA : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇರಳ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್​ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಲಯಾಳಂ ನಟಿಯೊಬ್ಬರು ರಾಹುಲ್​ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ, ತೃತೀಯ ಲಿಂಗಿಯೊಬ್ಬರು ಮುಂದೆ ಬಂದಿದ್ದು, ಅಶ್ಲೀಲ ಮಸೇಜ್​ಗಳನ್ನು ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಹುಲ್​ ಮಮ್‌ಕೂಟತಿಲ್ ಅವರು ಒಮ್ಮೆ ನನ್ನ ಬಳಿ ತನ್ನ ಲೈಂಗಿಕ ಆಸೆ ಮತ್ತು ಅತ್ಯಾಚಾರದ ಕಲ್ಪನೆಯನ್ನು ಹಂಚಿಕೊಂಡಿದ್ದರು. ಈ ವಿಷಯವನ್ನು ಅವರ ಪಕ್ಷದ ಮುಖಂಡರಿಗೆ ತಿಳಿಸಿದರು ಕೂಡ ಅದು ವ್ಯರ್ಥವಾಯಿತು ಎಂದು ಅವಂತಿಕಾ ಹೆಸರಿನ ತೃತೀಯ ಲಿಂಗಿ ಕಾರ್ಯಕರ್ತೆ ಹೇಳಿದ್ದಾರೆ.

ಮಲಯಾಳಂ ನಟಿ ರಿನಿ ಜಾರ್ಜ್ ಆರೋಪ

ಅಂದಹಾಗೆ, ಮಲಯಾಳಂ ನಟಿ ರಿನಿ ಜಾರ್ಜ್ ಅವರು ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ, ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಮಮ್‌ಕೂಟತಿಲ್ ಗುರುವಾರ (ಆಗಸ್ಟ್​ 21) ತಮ್ಮ ಹುದ್ದೆಯಿಂದ ಕೆಳಗಿಳಿದರು. ಗಮನಾರ್ಹ ಸಂಗತಿ ಏನೆಂದರೆ, ರಿನಿ ಜಾರ್ಜ್ ಅವರು ತಮ್ಮ ಹೇಳಿಕೆಯಲ್ಲಿ ಯಾರೊಬ್ಬರು ಹೆಸರನ್ನು ಕೂಡ ಉಲ್ಲೇಖಿಸಲಿಲ್ಲ. ಈ ಪ್ರಕರಣ ಭಾರಿ ಸುದ್ದಿಯಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಆರೋಪಗಳನ್ನು ನಿರಾಕರಿಸಿದರು. ಆದರೆ, ಬಿಜೆಪಿ ಮಮ್‌ಕೂಟತಿಲ್ ಅವರ ಪಾತ್ರವನ್ನು ಆರೋಪಿಸಿದೆ. ಇದರ ಬೆನ್ನಲ್ಲೇ ಮಮ್‌ಕೂಟತಿಲ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು.

ಅತ್ಯಾಚಾರದ ಬಗ್ಗೆ ಕನಸು ಕಾಣುವ ವ್ಯಕ್ತಿ

ಇದೀಗ ತೃತೀಯ ಲಿಂಗಿ ಆವಂತಿಕಾ ಅವರು ಮುಂದೆ ಬಂದು ರಾಹುಲ್​ ಮಮ್​ಕೂಟತಿಲ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಲಯಾಳಂ ಮಾಧ್ಯಮಗಳ ಜೊತೆ ಮಾತನಾಡಿದ ಆವಂತಿಕಾ, ತ್ರಿಕ್ಕಾಕರ ಉಪಚುನಾವಣಾ ಪ್ರಚಾರದ ಸಮಯದಲ್ಲಿ ನಡೆದ ಮಾಧ್ಯಮ ಚರ್ಚೆಯ ವೇಳೆ ನಾನು ರಾಹುಲ್ ಅವರನ್ನು ಭೇಟಿಯಾದೆ. ಅದಾದ ನಂತರ, ನಾನು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದೆ. ಅವರು ಕೂಡ ರಿಕ್ವೆಸ್ಟ್​ ಸ್ವೀಕರಿಸಿದರು. ನಾವು ಶೀಘ್ರದಲ್ಲೇ ಒಳ್ಳೆಯ ಸ್ನೇಹಿತರಾದೆವು. ಆರಂಭದಲ್ಲಿ, ಅವರು ರಾತ್ರಿ 11 ಗಂಟೆಯ ನಂತರ ನನಗೆ ಕರೆ ಮಾಡುತ್ತಿದ್ದರು. ನಂತರ, ಅವರು ನನಗೆ ನಿರಂತರವಾಗಿ ಕರೆ ಮಾಡಲು ಪ್ರಾರಂಭಿಸಿದರು. ಇಡೀ ಸಂಭಾಷಣೆಯ ಸಮಯದಲ್ಲಿ ಅವರು ರಾಜಕೀಯದ ಬಗ್ಗೆ ಅಷ್ಟೇನೂ ಮಾತನಾಡಲಿಲ್ಲ. ಆತ ಆಗಾಗ್ಗೆ ಲೈಂಗಿಕ ಪ್ರಚೋದನೆಯ ಮಸೇಜ್​ಗಳನ್ನು ಕಳುಹಿಸುತ್ತಿದ್ದ. ಒಮ್ಮೆ, ಅತ್ಯಾಚಾರವನ್ನು ಹೋಲುವ ರೀತಿಯಲ್ಲಿ ನನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಬಯಕೆಯನ್ನು ಆತ ವ್ಯಕ್ತಪಡಿಸಿದ. ಇದರಿಂದ ನನಗೆ ಆಘಾತವಾಯಿತು. ಬಳಿಕ ನಾನು ಕಾಂಗ್ರೆಸ್ ನಾಯಕರಿಗೆ ಈ ವಿಚಾರವನ್ನು ತಿಳಿಸಿದ್ದೆ. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅತ್ಯಾಚಾರದ ಬಗ್ಗೆ ಕನಸು ಕಾಣುವ ವ್ಯಕ್ತಿ, ಶಾಸಕನಾಗಿ ಸಮಾಜದಲ್ಲಿ ಹೇಗೆ ಮಾದರಿಯಾಗಲು ಸಾಧ್ಯ ಎಂದು ಆವಂತಿಕಾ ಹೇಳಿದ್ದಾರೆ.

ನಾನು ಸವಾಲು ಹಾಕುತ್ತೇನೆ

ಅಂದಹಾಗೆ, ಇತ್ತೀಚಿನ ಆರೋಪದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್​ ಮಮ್​ಕೂಟತಿಲ್​ ಅವರಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಗುರುವಾರ ತಡವಾಗಿ ಪ್ರತಿಕ್ರಿಯೆ ನೀಡಿದ ಅವರು ಮಲಯಾಳಂ ನಟಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದರು. ನನ್ನ ವಿರುದ್ಧ ದೂರು ನೀಡಿದ ವ್ಯಕ್ತಿಗೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಾಬೀತುಪಡಿಸಲು ನಾನು ಸವಾಲು ಹಾಕುತ್ತೇನೆ. ಎಲ್ಲಿಯೂ ನನ್ನ ವಿರುದ್ಧ ಯಾವುದೇ ನಿರ್ದಿಷ್ಟ ದೂರು ದಾಖಲಾಗಿಲ್ಲ ಎಂದು ಹೇಳಿದರು. ಅಲ್ಲದೆ, ಯಾರೂ ನನ್ನ ರಾಜೀನಾಮೆಗೆ ಒತ್ತಾಯಿಸಲಿಲ್ಲ. ಆ ನಟಿ ನನ್ನ ಸ್ನೇಹಿತೆ ಮತ್ತು ಅವರು ಹೇಳಿದ ವ್ಯಕ್ತಿ ನಾನೇ ಎಂದು ನಾನು ಕೂಡ ನಂಬುವುದಿಲ್ಲ. ಅವರು ನನ್ನ ಒಳ್ಳೆಯ ಸ್ನೇಹಿತೆ ಮತ್ತು ಹಾಗೆಯೇ ಇರುತ್ತಾರೆ. ನಾನು ಇಲ್ಲಿಯವರೆಗೆ ದೇಶದ ಕಾನೂನು ಅಥವಾ ಸಂವಿಧಾನದ ವಿರುದ್ಧ ಏನನ್ನೂ ಮಾಡಿಲ್ಲ ಎಂದು ನಾನು ನಂಬುತ್ತೇನೆ ಎಂದರು.

ರಾಹುಲ್​ ಅವರು ಮಹಿಳೆಯೊಬ್ಬಳನ್ನು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್​ ಆಗಿರುವ ಬಗ್ಗೆ ಮಲಯಾಳಂ ಸುದ್ದಿ ವಾಹಿನಿಯೊಂದು ಪ್ರಶ್ನೆ ಮಾಡಿದಾಗ, ಇಂದಿನ ಯುಗದಲ್ಲಿ ಅಂತಹ ಕ್ಲಿಪ್‌ಗಳನ್ನು ರಚಿಸುವುದು ಕಷ್ಟವೇನಲ್ಲ ಎಂದು ಮಮ್‌ಕೂಟತಿಲ್ ಉತ್ತರಿಸಿದರು. ಅಲ್ಲದೆ, ನಾನು ಯಾವುದೇ ತಪ್ಪುಗಳನ್ನು ಮಾಡಿದ್ದರೆ, ಅವುಗಳನ್ನು ಕಾನೂನುಬದ್ಧವಾಗಿ ಎದುರಿಸಲು ಸಿದ್ಧನಿದ್ದೇನೆ. ಇಂದಿನವರೆಗೆ, ನಾನು ನನ್ನ ಆತ್ಮಸಾಕ್ಷಿಯಲ್ಲಿ ಯಾವುದೇ ಕಾನೂನುಬಾಹಿರ ಕೃತ್ಯವನ್ನು ಮಾಡಿಲ್ಲ. ಇದರ ಬಗ್ಗೆ ಯಾರಿಗಾದರೂ ಯಾವುದೇ ವಾದವಿದ್ದರೆ, ಅವರು ಅದನ್ನು ಕಾನೂನುಬದ್ಧವಾಗಿ ಪ್ರಶ್ನಿಸಬಹುದು ಎಂದರು.

ರಾಹುಲ್​ ವಿರುದ್ಧ ನಟಿಯ ಆರೋಪ ವೈರಲ್ ಆಗುತ್ತಿದ್ದಂತೆ, ಬಿಜೆಪಿ, ಮಾಮ್‌ಕೂಟತಿಲ್ ಅವರ ಪಾತ್ರವನ್ನು ಆರೋಪಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಪಾಲಕ್ಕಾಡ್‌ನಲ್ಲಿರುವ ಅವರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಅದನ್ನು ತಡೆಯಲು ಪ್ರಯತ್ನಿಸಿದ ಪೊಲೀಸ್ ಸಿಬ್ಬಂದಿಯೊಂದಿಗೆ ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆಸಿದರು. ಸದ್ಯ ಪ್ರಕರಣ ಕೇರಳ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)