ನ್ಯೂಸ್

ಬಿಎಂಟಿಸಿ ಬಸ್​ಗಳಲ್ಲಿ ನಾಳೆ ಮಹಿಳೆಯರಿಗೆ ಪ್ರಯಾಣ ಉಚಿತ; ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಕೊಡುಗೆ

ಬೆಂಗಳೂರು: ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹಿಳೆಯರಿಗೆಂದೇ ವಿಶೇಷ ಕೊಡುಗೆಯೊಂದನ್ನು ಘೋಷಣೆ ಮಾಡಿದೆ. ಈ ಮೂಲಕ ಮಹಿಳಾ ದಿನದ ಸಂಭ್ರಮದಲ್ಲಿ ಸಂಸ್ಥೆಯೂ ಭಾಗಿಯಾಗಲು ಮುಂದಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 8ರಂದು ರಾಜಧಾನಿ ಬೆಂಗಳೂರಿನ ಮಹಿಳೆಯರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರು ಪ್ರತಿದಿನ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಹಾಗೂ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಭಾಗವಹಿಸಲು ಸುರಕ್ಷಿತ, ಉತ್ತಮ ಭದ್ರತೆಯುಳ್ಳ ಸಾರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಆರ್ಥಿಕವಾಗಿ ಶಕ್ತಿ ತುಂಬಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾಳೆ ನಗರದ ಎಲ್ಲ ಬಿಎಂಟಿಸಿ ಬಸ್​ಗಳಲ್ಲಿ ಅವರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಉಚಿತ ಪ್ರಯಾಣವು ಬಿಎಂಟಿಸಿಯ ಹವಾನಿಯಂತ್ರಿತ ವಜ್ರ ಮತ್ತು ವಾಯುವಜ್ರ ಸೇವೆಗಳಿಗೆ ಕೂಡ ಅನ್ವಯಿಸುತ್ತದೆ ಎಂದು ಸಂಸ್ಥೆ ಹೇಳಿದೆ.