| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಮಹಾಮಾರಿ ಕರೊನಾ ಸೋಂಕು ನಿಮೂಲನೆಗೆ ಕೇಂದ್ರ ಸರ್ಕಾರ ಲಸಿಕೆ ಉತ್ಸವ ಘೋಷಣೆ ಮಾಡಿದ ಬೆನ್ನಲ್ಲಿಯೇ ಸೈಬರ್ ಕಳ್ಳರು, ಕೋವಿಡ್ ಲಸಿಕೆ ನೋಂದಣಿ ಸೋಗಲ್ಲಿ ವಂಚನೆಗೆ ಬಲೆಬೀಸಿದ್ದಾರೆ. ಮೊಬೈಲ್ಗೆ ಲಿಂಕ್ ಮತ್ತು ಆಪ್ ಕಳುಹಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಬ್ಯಾಂಕ್ ಖಾತೆಗೆ ಕನ್ನ ಬೀಳಲಿದೆ ಎಂದು ಕೇಂದ್ರ ಸೈಬರ್ ಭದ್ರತಾ ಸಚಿವಾಲಯ ಎಚ್ಚರಿಸಿದೆ.
ಕೋವಿಡ್-19 ಎರಡನೇ ಎಲ್ಲೆಡೆ ವ್ಯಾಪಿಸಿರುವುದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹಲವು ಯೋಜನೆ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ಅದರಲ್ಲಿ ಪ್ರಮುಖವಾಗಿದೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.80 ಮಂದಿ ಇದರಡಿ ಬರುತ್ತಾರೆ. ಅದಕ್ಕಾಗಿ ಲಸಿಕೆ ಪಡೆಯಲು ನೋಂದಣಿಗೆ ಆನ್ಲೈನ್ ಸೇವೆ ಒದಗಿಸಿದೆ. ನೋಂದಣಿ ಮಾಡಿಕೊಂಡ ವ್ಯಕ್ತಿಗೆ ದಿನಾಂಕ, ಸಮಯ ಮತ್ತು ಲಸಿಕಾ ಕೇಂದ್ರದ ವಿಳಾಸ ಸಹ ಲಭ್ಯವಾಗಲಿದೆ. ಆ ಸಮಯಕ್ಕೆ ತೆರಳಿ ಲಸಿಕೆ ಪಡೆದು ಸುರಕ್ಷಿತವಾಗಿ ಮನೆಗೆ ಬರುವಂತಹ ಯೋಜನೆ ಇದಾಗಿದೆ. ಲಸಿಕಾ ಕೇಂದ್ರದ ಬಳಿಕೆಗೆ ಹೋಗಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂಬುದು ಇದರ ಉದ್ದೇಶವಾಗಿದೆ.
ಅದಕ್ಕಾಗಿ ಅಧಿಕೃತ ವೆಬ್ಸೈಟ್, ಪೋರ್ಟಲ್ಗಳನ್ನು ಪರಿಚಯಿಸಲಾಗಿದೆ. ಆದರೆ ಸೈಬರ್ ಖದೀಮರು, ಮೊಬೈಲ್ ಮತ್ತು ಕಂಪ್ಯೂಟರ್ ಡೇಟಾ ಕಳವು ಮಾಡುವ ಹಾಗೂ ಬ್ಯಾಂಕ್ ಖಾತೆಗೆ ಕನ್ನ ಹಾಕುವ ನೂರಾರು ಲಿಂಕ್ ಮತ್ತು ಆಪ್ಗಳನ್ನು ಗೂಗಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೊಬೈಲ್ ನಂಬರ್ಗೆ ಸಂದೇಶ ಅಥವಾ ವಾಟ್ಸ್ಆಪ್ ಎಸ್ಎಂಎಸ್ ಬರಲಿವೆ. ಅದರಲ್ಲಿಯೂ ಈ ಎಲ್ಲ ಆಪ್ ಮತ್ತು ಲಿಂಕ್ಗಳು ಕೋವಿಡ್-19 ಲಸಿಕೆ ನೋಂದಣಿಗೆ ಕೇಂದ್ರ ಸರ್ಕಾರ ಪರಿಚಯಿಸಿರುವ ಮಾದರಿಯಲ್ಲಿ ಇರಲಿವೆ. ಸ್ವಲ್ಪ ವ್ಯತ್ಯಾಸ ಇರಲಿದ್ದು, ಸಾಮಾನ್ಯರಿಗೆ ಬಹುಬೇಗ ಗೊತ್ತಾಗುವುದಿಲ್ಲ.
ಯಾವ ರೀತಿ ಖಾತೆಗೆ ಕನ್ನ?: ಮೊಬೈಲ್ಗೆ ಸಂದೇಶದ ಜತೆಗೆ ಲಿಂಕ್ ಬರಲಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅಪ್ಲಿಕೇಷನ್ ಡೌನ್ಲೋಡ್ ಆಗಲಿದೆ. ಆನಂತರ ಹೆಸರು, ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರ, ಕ್ರೆಡಿಟ್, ಡೆಬಿಟ್ ಕಾರ್ಡ್ ನಂಬರ್ ಕೇಳಲಿದೆ. ಇಷ್ಟು ಭರ್ತಿ ಮಾಡಿದ ಮೇಲೆ ಒಟಿಪಿ ಬರಲಿದ್ದು, ಅದನ್ನು ಲಿಂಕ್ನಲ್ಲಿ ನೋಂದಣಿ ಮಾಡಿದಾಗ ಬ್ಯಾಂಕ್ ಖಾತೆಗೆ ಕನ್ನ ಬೀಳಲಿದೆ. ಇನ್ನೂ ಕೆಲವರ ಮೊಬೈಲ್, ಕಂಪ್ಯೂಟರ್ನಲ್ಲಿನ ಡೇಟಾ, ಫೋಟೋ, ಮೊಬೈಲ್ ನಂಬರ್ಗೂ ಕನ್ನ ಬೀಳಲಿದೆ.
ಇಂಜಕ್ಷನ್, ಆಕ್ಸಿಜನ್ ಸೋಗಲ್ಲೂ ವಂಚನೆ: ಆಮ್ಲಜನಕ, ರೆಮ್ೆಸಿವಿರ್, ಐಸಿಯು ಬೆಡ್ ಕೊಡಿಸುವ ನೂರಾರು ಅನಾಮಧೇಯ ಹೆಲ್ಪ್ ಲೈನ್ ನಂಬರ್ ವಾಟ್ಸ್ ಆಪ್ ಮತ್ತು ಸಂದೇಶಗಳು ವೈರಲ್ ಆಗುತ್ತಿವೆ. ಇದರಲ್ಲಿ ಯಾವುದೇ ಅಸಲಿ, ಯಾವುದು ನಕಲಿ ಎಂಬುದು ಗೊತ್ತಾಗುತ್ತಿಲ್ಲ. ಮಹಿಳಾ ಪೊಲೀಸ್ಗೆ ಆಮ್ಲಜನಕ ಸಿಲಿಂಡರ್ ಕೊಡಿಸುವ ನೆಪದಲ್ಲಿ 9 ಸಾವಿರ ರೂ. ಪಡೆದು ವಂಚನೆ ಮಾಡಿದ್ದರು. ಐಸಿಯು ಬೆಡ್ ಕೊಡಿಸುವ ಸೋಗಲ್ಲಿ ಹಲವರಿಗೆ ಸೈಬರ್ ಕಳ್ಳರು ವೋಸ ಮಾಡುತ್ತಿದ್ದಾರೆ.
ಆನ್ಲೈನ್, ಕಾಳಸಂತೆಯಲ್ಲಿ ರೆಮ್ಸಿವಿರ್, ಬೆಡ್, ಅಮ್ಲಜನಕ, ಲಸಿಕೆ ಹೆಸರಿನಲ್ಲಿ ವಂಚನೆ ಮಾಡುವರ ಬಗ್ಗೆ ಎಚ್ಚರಿಕೆ ಇರಲಿ. ಇವರ ಬಗ್ಗೆ ಸ್ಥಳೀಯ ಪೊಲೀಸರಿಗೆ ಅಥವಾ ಸಿಸಿಬಿಗೆ ಮಾಹಿತಿ ನೀಡಿ ಸಹಕರಿಸಿ. | ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತ (ಅಪರಾಧ)