ನ್ಯೂಸ್

ಕಳೆದ 21 ತಿಂಗಳಲ್ಲಿ ಫ್ರ್ಯಾನ್ಸ್​ ಕಂಡಿದ್ದು 5 ಪ್ರಧಾನಿಗಳು! ಈ ವಿಷಯಗಳೇ ಸೆಬಾಸ್ಟಿಯನ್​ ರಾಜೀನಾಮೆಗೆ ಕಾರಣ? | France PM

France PM Resigns: ಫ್ರಾನ್ಸ್‌ನಲ್ಲಿ ರಾಜಕೀಯ ಅನಿಶ್ಚಿತತೆ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದು, ಇತ್ತೀಚೆಗಷ್ಟೇ ನೂತನ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಸೆಬಾಸ್ಟಿಯನ್ ಲೆಕೋರ್ನು ಇದೀಗ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.

ದಿಢೀರ್​ ರಾಜೀನಾಮೆ ಘೋಷಣೆ

ಸೋಮವಾರ (ಅ.06) ಈ ನಿರ್ಧಾರವನ್ನು ಘೋಷಿಸಿದ ಅವರು, ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ 9ರಂದು ಫ್ರಾನ್ಸ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಆದಾಗ್ಯೂ, ಪಿಎಂ ಆಗಿ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳೊಳಗೆ ಸೆಬಾಸ್ಟಿಯನ್​ ರಾಜೀನಾಮೆ ನೀಡಿರುವುದು ನಿಜಕ್ಕೂ ಅಚ್ಚರಿಯ ಬೆಳವಣಿಗೆಯೇ ಸರಿ. ಸೆಬಾಸ್ಟಿಯನ್ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ಬಹಳ ಆಪ್ತರು. ಭಾನುವಾರ ಎಮ್ಯಾನುಯೆಲ್ ಮ್ಯಾಕ್ರನ್‌ರನ್ನು ಮುಖಾಮುಖಿ ಭೇಟಿಯಾದ ಬಳಿಕ ಸೆಬಾಸ್ಟಿಯನ್ ತಮ್ಮ ರಾಜೀನಾಮೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು. ಅಂತೆಯೇ, ಅಧ್ಯಕ್ಷರು ಕೂಡ ತಕ್ಷಣವೇ ಅವರ ರಾಜೀನಾಮೆಯನ್ನು ಅಂಗೀಕರಿಸಿದರು.

ಸದ್ಯ ಈ ಬೆಳವಣಿಗೆಗಳು ಫ್ರಾನ್ಸ್ ರಾಜಕೀಯದಲ್ಲಿ ದೊಡ್ಡ ಗೊಂದಲ ತಂದೊಡ್ಡಿದೆ. ಬಜೆಟ್ ಸಮಸ್ಯೆಗಳು, ಯುಕ್ರೇನ್‌ನಲ್ಲಿನ ಯುದ್ಧ, ಗಾಜಾದಲ್ಲಿನ ಪರಿಸ್ಥಿತಿ ಮತ್ತು ಯುಎಸ್ ಅಧ್ಯಕ್ಷರ ನೀತಿಗಳಿಂದ ಉಂಟಾದ ಅವ್ಯವಸ್ಥೆ ರಾಜಕೀಯ ಅನಿಶ್ಚಿತತೆಗೆ ಕಾರಣ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಉಲ್ಲೇಖಿಸಿವೆ. ಒಂದು ತಿಂಗಳ ಹಿಂದೆ, ಸೆಬಾಸ್ಟಿಯನ್ ಲೆ ಕೊಯೂರ್ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಫ್ರಾನ್ಸ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆ ಕೂಗುಗಳು ವ್ಯಾಪಕವಾಗಿ ಸದ್ದು ಮಾಡಿದವು.

21 ತಿಂಗಳಲ್ಲಿ 5 ಪ್ರಧಾನಿಗಳು!

'ಬ್ಲ್ಯಾಕ್ ಎವೆರಿಥಿಂಗ್' ಹೆಸರಿನಲ್ಲಿ ಸಾವಿರಾರು ಪ್ರತಿಭಟನಾಕಾರರು ಪ್ಯಾರಿಸ್ ಮತ್ತು ದೇಶದಲ್ಲಿ ಅನೇಕ ಪ್ರಮುಖ ರಸ್ತೆಗಳನ್ನು ತಡೆದು ಆಕ್ರೋಶ ಹೊರಹಾಕಿದರು. ಈ ವೇಳೆ ಬಸ್‌ಗಳನ್ನು ಸುಟ್ಟುಹಾಕಲಾಯಿತು ಮತ್ತು ಅನೇಕ ಪ್ರದೇಶಗಳಲ್ಲಿ ರೈಲುಗಳನ್ನು ತಡೆಯಲಾಯಿತು. ಸೆಬಾಸ್ಟಿಯನ್ ಭಾನುವಾರ ಹೊಸ ಸಚಿವ ಸಂಪುಟವನ್ನು ರಚಿಸಿದರು, ಆದರೆ ಸಂಪುಟದ ಸಂಯೋಜನೆಯು ರಾಜಕೀಯ ಟೀಕೆಗೆ ಗುರಿಯಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಮಾಜಿ ಹಣಕಾಸು ಸಚಿವ ಬ್ರೂನೋ ರೆ ಮೈಯೆರೊರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.

ಹಿಂದಿನ ಪ್ರಧಾನಿ ಫ್ರಾಂಕೋಯಿಸ್ ಬೆರೊ ಅವರನ್ನು ತೆಗೆದುಹಾಕಿ ಸೆಬಾಸ್ಟಿಯನ್ ಅವರನ್ನು ನೇಮಿಸಿದ ಕೇವಲ ಒಂದು ತಿಂಗಳಲ್ಲೇ ಇದೀಗ ಅವರೂ ಸಹ ರಾಜೀನಾಮೆ ನೀಡುವಂತ ಪರಿಸ್ಥಿತಿ ಫ್ಯಾನ್ಸ್​ನಲ್ಲಿ ನಿರ್ಮಾಣವಾಗಿದೆ. ರೂಟರ್ಸ್​ ವರದಿ ಪ್ರಕಾರ, ಕಳೆದ 21 ತಿಂಗಳಲ್ಲಿ ಫ್ರಾನ್ಸ್‌ ಕಂಡಿರುವುದು ಐದು ಪ್ರಧಾನಿಗಳನ್ನು! ಸೆಬಾಸ್ಟಿಯನ್ ಸೇರಿದಂತೆ ಒಟ್ಟು ಐದು ಪ್ರಧಾನ ಮಂತ್ರಿಗಳು ಎರಡು ವರ್ಷದೊಳಗೆ ರಾಜೀನಾಮೆ ಘೋಷಿಸಿ, ತಮ್ಮ ಪಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ,(ಏಜೆನ್ಸೀಸ್).