ನ್ಯೂಸ್

ಆಸ್ಪತ್ರೆ ದಾಖಲಾತಿಗೆ ರಾಷ್ಟ್ರೀಯ ನೀತಿ ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಕರೊನಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ವಾರಗಳೊಳಗೆ ಆಸ್ಪತ್ರೆ ದಾಖಲಾತಿಯ ಕುರಿತಾಗಿ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅಲ್ಲಿಯವರೆಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ರೋಗಿಗೆ ಸ್ಥಳೀಯ ವಸತಿ ಸಂಬಂಧಿತ ದಾಖಲೆ ಅಥವಾ ಗುರುತಿನ ಚೀಟಿ ಇಲ್ಲವೆಂಬ ಕಾರಣಕ್ಕೆ ಆಸ್ಪತ್ರೆ ದಾಖಲಾತಿ ಅಥವಾ ಅಗತ್ಯ ಔಷಧಿಗಳನ್ನು ನಿರಾಕರಿಸಬಾರದು ಎಂದು ನಿರ್ದೇಶಿಸಿದೆ.

ಕರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಆಕ್ಸಿಜನ್ ಮತ್ತು ಔಷಧಗಳ ಪೂರೈಕೆ ಮತ್ತು ಲಸಿಕೆ ನೀತಿಯ ಕುರಿತಾಗಿ ಸುಯೊ ಮೋಟೋ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಈ ಕುರಿತಾಗಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್​, ಎಲ್.ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್​ ಅವರನ್ನೊಳಗೊಂಡ ನ್ಯಾಯಪೀಠವು ಭಾನುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವು ನಿರ್ದೇಶನಗಳನ್ನೊಳಗೊಂಡ ಆದೇಶ ನೀಡಿದೆ.

ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ ಬೆಡ್​ ಪಡೆಯುವುದೇ ಜನರು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದೆ ಎಂದ ಕೋರ್ಟ್, ವಿವಿಧ ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳು ಆಸ್ಪತ್ರೆ ದಾಖಲಾತಿಗೆ ಅವರದ್ದೇ ಆದ ಪ್ರೊಟೊಕಾಲ್​ಗಳನ್ನು ಅನುಸರಿಸುತ್ತಿರುವುದು ಗೊಂದಲು ಸೃಷ್ಟಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ದೇಶಾದ್ಯಂತ ಪಾಲಿಸಬೇಕಾದ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕರ ಶೋಷಣೆಯಾದ ಬಗ್ಗೆ ಮಾಧ್ಯಮದಲ್ಲಿ ಮಾಹಿತಿ ಲಭ್ಯವಾದರೆ ಕೋರ್ಟ್ ಅದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿರುವ ಕೋರ್ಟ್, ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ, ಡಿಜಿಪಿ ಮತ್ತು ಪೊಲೀಸ್​ ಕಮಿಷನರ್​ಗಳಿಗೆ ಈ ಬಗ್ಗೆ ಸೂಚನೆ ನೀಡಬೇಕು. ದೇಶಾದ್ಯಂತ ಸ್ಥಳೀಯ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವುದಕ್ಕೋಸ್ಕರ ಕೋರ್ಟ್​ನ ಈ ಆದೇಶದ ಪ್ರತಿಗಳನ್ನು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳಿಗೆ ಕಳುಹಿಸಿಕೊಡಬೇಕೆಂದು ನ್ಯಾಯಪೀಠ ಸೂಚಿಸಿದೆ.

ಆಕ್ಸಿಜನ್ ಬಫರ್​ ಸ್ಟಾಕ್ಸ್​ ಸೃಷ್ಟಿಸಿ : "ಆಕ್ಸಿಜನ್ ಪೂರೈಕೆಯು ನಿರಂತರವಾಗಿ ನಡೆಯುವಂತೆ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರವು ಆಕ್ಸಿಜನ್​ನ ಬಫರ್​ ಸ್ಟಾಕ್​ಅನ್ನು ಸೃಷ್ಟಿಸಬೇಕು. ಮತ್ತು ಆಕ್ಸಿಜನ್​ನ ಎಮರ್ಜೆನ್ಸಿ ಸ್ಟಾಕ್​ಗಳ ಲಭ್ಯತೆಯನ್ನು ವಿಕೇಂದ್ರೀಕರಿಸಬೇಕು ಎಂದು ಕೋರ್ಟ್​ ಹೇಳಿದೆ. ರಾಜ್ಯಗಳಿಗೆ ಈಗಿರುವ ಆಕ್ಸಿಜನ್ ಸಪ್ಲೈನೊಂದಿಗೆ ಈ ಎಮರ್ಜೆನ್ಸಿ ಸ್ಟಾಕ್ಸ್​ಅನ್ನು ನಾಲ್ಕು ದಿನಗಳಲ್ಲಿ ಸ್ಥಾಪಿಸಿ ದಿನವೂ ಅದು ಭರ್ತಿಯಾಗುತ್ತಿರುವಂತೆ ನೋಡಿಕೊಳ್ಳಬೇಕು" ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.

ರಾಜಧಾನಿ ದೆಹಲಿಯಲ್ಲಿರುವ ಆಕ್ಸಿಜನ್ ಕೊರತೆಯನ್ನು ಇಂದು (ಮೇ 3 ರ) ಮಧ್ಯರಾತ್ರಿಯೊಳಗೆ ಸರಿಪಡಿಸಬೇಕು ಎಂದಿದೆ. ಆಕ್ಸಿಜನ್ ಪೂರೈಕೆಯ ಜವಾಬ್ದಾರಿಯನ್ನು ಒಬ್ಬರ ಮೇಲೊಬ್ಬರು ಹೊರಿಸುವ ಪ್ರಯತ್ನದಲ್ಲಿ ನಾಗರಿಕರ ಪ್ರಾಣವನ್ನು ತೊಂದರೆಗೆ ಸಿಲುಕಿಸಬಾರದು. ನಾಗರೀಕರ ಜೀವಗಳನ್ನು ಉಳಿಸುವ ದಾಯಿತ್ವ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ಮೇಲಿದ್ದು, ಈ ಸನ್ನಿವೇಶವನ್ನು ಸರಿಪಡಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲು ಪರಸ್ಪರ ಸಹಕರಿಸಬೇಕು ಎಂದು ಕೋರ್ಟ್ ಹೇಳಿದೆ.

ಈ ಸಂಕಟದ ಸಮಯದಲ್ಲಿ ಹಲವರು ಜನರ ಅಸಹಾಯಕತೆಯನ್ನು ದುಡ್ಡು ಸಂಪಾದಿಸಲು ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದಿರುವ ಕೋರ್ಟ್, ಕರೊನಾ ಚಿಕಿತ್ಸೆಯ ಅಗತ್ಯ ವಸ್ತುಗಳ ಬ್ಲಾಕ್​ ಮಾರ್ಕೆಟಿಂಗ್ ನಿಯಂತ್ರಿಸಲು ವಿಶೇಷ ತಂಡ ರಚಿಸಲೂ ಸಲಹೆ ನೀಡಿದೆ. ಆ್ಯಂಬುಲೆನ್ಸ್​ಗಳಿಗೂ ಪ್ರೊಟೊಕಾಲ್ ರೂಪಿಸಬಹುದೇ ಪರಿಗಣಿಸಿ ಎಂದು ಸರ್ಕಾರಕ್ಕೆ ಹೇಳಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ವೈದ್ಯರು ಮತ್ತು ಎಲ್ಲಾ ಸೇವಾಕರ್ತರ ಕಾರ್ಯವನ್ನು ಕೋರ್ಟ್​ ಪ್ರಶಂಸಿಸಿದೆ. (ಏಜೆನ್ಸೀಸ್)