ಆಗ್ರಾ: ಚಲಿಸುತ್ತಿದ್ದ ರೈಲಿನ ಬಾತ್ರೂಮ್ ಕಮೋಡ್ನಲ್ಲಿ ಮಗುವಿನ ಕಾಲು ಸಿಲುಕಿಕೊಂಡಿರುವ ಘಟನೆ ಉತ್ತರಪ್ರದೇಶದ ಆಗ್ರಾ ಬಳಿ ನಡೆದಿದೆ.
ಘಟನೆಯಲ್ಲಿ ಶೈನಾ(4) ಎಂಬ ಬಾಲಕಿಯ ಕಾಲಿಗೆ ಗಾಯವಾಗಿದೆ. ಬಿಹಾರದ ಸಿತಾಮರ್ಹಿ ನಿವಾಸಿಗಳಾಗಿರುವ ಮೊಹಮ್ಮದ್ ಅಲಿ, ಆತನ ಪತ್ನಿ ಸುಗ್ನಿ ಮತ್ತು 4 ವರ್ಷದ ಮಗಳು ಬರೌನಿ-ಬಾಂದ್ರಾ ಅವಧ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ಬಾಲಕಿಯ ತಾಯಿ ಆಕೆಯನ್ನು ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅಮ್ಮನ ಮೊಬೈಲ್ಗೆ ಕರೆ ಬಂದಿದ್ದು ಆಕೆ ಮಾತನಾಡುವುದರಲ್ಲಿ ನಿರತಳಾಗಿದ್ದಾಳೆ.
ಅಷ್ಟರಲ್ಲಿ ಬಾಲಕಿಯ ಕಾಲು ಕಮೋಡ್ನಲ್ಲಿ ಸಿಲುಕಿಕೊಂಡಿದ್ದು, ಹುಡುಗಿ ಅಳಲು ಪ್ರಾರಂಭಿಸಿದಳು. ಕೂಡಲೇ ತಾಯಿ ಮಗುವನ್ನು ನೋಡಿ ಮೊದಮೊದಲು ಆಕೆಯ ಕಾಲು ತೆಗೆಯಲು ಪ್ರಯತ್ನಿಸಿದ್ದಾಳೆ. ಆದರೆ ಮಗುವಿನ ಕಾಲು ಹೊರಲೇ ಇಲ್ಲ. ಕೊನೆಗೆ ಆ ತಾಯಿ ತಂದೆಗೆ ಇದರ ಬಗ್ಗೆ ಕೂಗಿ ಹೇಳಿದ್ದಾಳೆ ಕೂಡಲೇ ಅಲಿ ಸೇರಿದಂತೆ ಇತರ ಪ್ರಯಾಣಿಕರು ಕೂಡ ಅಲ್ಲಿ ಜಮಾಯಿಸಿ ಬಾಲಕಿಯ ಕಾಲನ್ನು ಹೊರತೆಗೆಯಲು ಪ್ರಯತ್ನಿಸಿದ್ದು, ಕಾಲು ಹೊರಬರಲೇ ಇಲ್ಲ.
ಮುಂದಿನ ರೈಲು ನಿಲ್ದಾಣವೆಂದರೆ ಫತೇಪುರ್ ಸಿಕ್ರಿ ಸುಮಾರು 24 ಕಿ.ಮೀ. ದೂರವಿದ್ದು, ರೈಲು ಮಾತ್ರ ಸಾಗುತ್ತಲೇ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಅಹಿತಕರ ಘಟನೆಯ ಭಯ ಪೋಷಕರನ್ನು ಕಾಡುತ್ತಿದ್ದ ವೇಳೆ ಅದೇ ಸಮಯದಲ್ಲಿ ಪ್ರಯಾಣಿಕರೊಬ್ಬರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿ, ಮುಂದಿನ ನಿಲ್ದಾಣದಲ್ಲಿ ಸಹಾಯ ಮಾಡುವುದಾಗಿ ರೈಲು ಸಿಬ್ಬಂದಿ ಹೇಳಿದ್ದಾರೆ.
ಸುಮಾರು ಅರ್ಧ ಗಂಟೆಯ ನಂತರ ರೈಲು ಫತೇಪುರ್ ಸಿಕ್ರಿ ನಿಲ್ದಾಣವನ್ನು ತಲುಪಿದ್ದು, ಇಲ್ಲಿ ಆರ್‌ಪಿಎಫ್ ಮತ್ತು ಜಿಆರ್‌ಪಿ ಸಿಬ್ಬಂದಿ ಕೋಚ್‌ಗೆ ಹಾಜರಾಗಿ ಬಾಲಕಿಯ ಸ್ಥಿತಿಯನ್ನು ಕಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಮೋಡ್ ಅಡಿಯಲ್ಲಿರುವ ಬಯೋ ಟಾಯ್ಲೆಟ್ ಬಾಕ್ಸ್ ತೆರೆಯದೆ ಬೇರೆ ದಾರಿಯೇ ಇರಲಿಲ್ಲ. ಇದಾದ ಬಳಿಕ ಸಿಬ್ಬಂದಿಯು ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದು ಕೊನೆಗೆ ಕಮೋಡ್ನಲ್ಲಿ ತೀವ್ರವಾಗಿ ಸಿಲುಕೊಂಡಿದ್ದ ಕಾಲನ್ನು ಹೊರತೆಗೆದು ಚಿಕಿತ್ಸೆ ನೀಡಿದ ಬಾಲಕಿಯನ್ನು ಸುರಕ್ಷಿತವಾಗಿ ರೈಲಿನಲ್ಲಿ ಕಳುಹಿಸಲಾಗಿದೆ.(ಏಜೆನ್ಸೀಸ್)