ನ್ಯೂಸ್

ಘೂಮರ್​ ಚಿತ್ರದ ಹಾಡಿಗೆ 4ರ ಬಾಲಕಿಯ ಕ್ಯೂಟ್​ ಡಾನ್ಸ್ ವಿಡಿಯೋ ವೈರಲ್​: ಅಮಿತಾಭ್​, ಅಭಿಷೇಕ್​ ಬಚ್ಚನ್​ರಿಂದ​ ಮೆಚ್ಚುಗೆ

ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್​ ಸಿನಿಮಾ ರಂಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಸನ್ನಿ ಡಿಯೋಲ್​ ನಟನೆಯ ಗಡಾರ್​-2 ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಆ. 18ರಂದು ತೆರೆಕಂಡ ಅಭಿಷೇಕ್​ ಬಚ್ಚನ್​ ಅಭಿನಯದ ಘೂಮರ್​ ಸಿನಿಮಾ ಸಹ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಈ ಚಿತ್ರಗಳ ಬಗ್ಗೆ ಬಾಲಿವುಡ್​ನಲ್ಲಿ ಮೆಚ್ಚುಗೆ ಮಾತುಗಳು ಕೇಳಿಬರುತ್ತಿರುವ ನಡುವೆಯೇ ನವೋಮಿಕಾ ನೇಗಿ ಹೆಸರಿನ 4 ವರ್ಷದ ಬಾಲಕಿ ಸಿನಿಮಾ ಹಾಲ್​ನಲ್ಲೇ ಘೂಮರ್​ ಚಿತ್ರದ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಅನೇಕ ಸುದ್ದಿ ಮಾಧ್ಯಮಗಳಲ್ಲೂ ಬಾಲಕಿ ಡಾನ್ಸ್​ ವಿಡಿಯೋ ಪ್ರಸಾರವಾಗಿದೆ.

ವಿಡಿಯೋದಲ್ಲಿ ನವೋಮಿಕಾ ನೇಗಿ, ಘೂಮರ್​ ಸಿನಿಮಾ ಟೈಟಲ್​ ಸಾಂಗ್​ ಘೂಮ್​ ಘೂಮ್​ ಹಾಡಿಗೆ ಕ್ಯೂಟ್ ಆಗಿ​ ಡಾನ್ಸ್​ ಮಾಡಿದ್ದು, ಅದನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಹೀಗಾಗಿ ತಮ್ಮ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸ್ಟೋರಿಗಳಲ್ಲಿ ವಿಡಿಯೋವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಸಿನಿದಿಗ್ಗಜರಿಂದ ಮೆಚ್ಚುಗೆ

ಸಿನಿಮಾ ಪ್ರೊಡಕ್ಷನ್ ಹೌಸ್ "ಹೋಪ್‌" ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಈ ವೀಡಿಯೊವನ್ನು ವೀರೇಂದ್ರ ಸೆಹ್ವಾಗ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಲೈಕ್​ ಮಾಡಿ, ಶೇರ್​ ಮಾಡಿದ್ದಾರೆ. ಈವರೆಗೂ ಇನ್​ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಟ್ವಿಟರ್​ನಲ್ಲಿ 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದೆ.

ಘೂಮರ್​ ಸಿನಿಮಾ ಕತೆ ಏನು?

ಅಂದಹಾಗೆ ಒಂದು ವರ್ಷಕ್ಕೂ ಹೆಚ್ಚು ಕಾಲದ ಅನುಪಸ್ಥಿತಿಯ ನಂತರ ಅಭಿಷೇಕ್, ಈಗ ಆರ್ ಬಾಲ್ಕಿ ನಿರ್ದೇಶನದ ಬಹು ನಿರೀಕ್ಷೆಯ ಚಿತ್ರ ‘ಘೂಮರ್‌’ನೊಂದಿಗೆ ಪುನರಾಗಮನ ಮಾಡಿದ್ದಾರೆ. ಇದರಲ್ಲಿ ಅವರು ಸೈಯಾಮಿ ಖೇರ್ ಜೊತೆಗೆ ನಟಿಸುತ್ತಿದ್ದಾರೆ. ಇದು ಓರ್ವ ಹುಡುಗಿ ಮತ್ತು ಅವಳ ಮಹತ್ವಾಕಾಂಕ್ಷೆಯ ಕಥೆ. ಕ್ರೀಡೆಯ ಪರಿಣಾಮ ಕೇವಲ ಕ್ರೀಡೆಯ ಮೇಲಲ್ಲ, ಇಡೀ ಕುಟುಂಬದ ಮೇಲೂ ಆಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಅತ್ಯಂತ ಸಂಕೀರ್ಣವಾದ ವಿಚಾರವನ್ನು ನಮ್ಮ ಮುಂದೆ ಅತ್ಯಂತ ಸರಳವಾಗಿ ಹೆಣೆದಿದ್ದಾರೆ ಆರ್.ಬಾಲ್ಕಿ. ಅಪಘಾತವೊಂದರಲ್ಲಿ ಬಲಗೈಯನ್ನು ಕಳೆದುಕೊಂಡ ಪ್ರತಿಭಾವಂತ ಬ್ಯಾಟ್ಸ್‌ಮನ್ ಅನಿನಾಳ ಸುತ್ತ ‘ಘೂಮರ್’ ಕಥೆ ಸುತ್ತುತ್ತದೆ. ಒಬ್ಬ ವಿಫಲ ಕ್ರಿಕೆಟಿಗ ಅವಳಿಗೆ ಹೊಸ ಭರವಸೆಯನ್ನು ನೀಡುತ್ತಾನೆ. ಅವಳ ಅದೃಷ್ಟವನ್ನು ಬದಲಾಯಿಸಲು ತರಬೇತಿ ನೀಡುತ್ತಾನೆ. (ಏಜೆನ್ಸೀಸ್​)