ನ್ಯೂಸ್

ಕಾಡುಹಂದಿಗಳನ್ನು ಬೇಟೆಯಾಡಲು ಗನ್ ಲೋಡ್​​ ಮಾಡುತ್ತಿದ್ದ ವೇಳೆ ಮಿಸ್‌ಫೈರ್; ಪ್ರಾಣ ಬಿಟ್ಟ 4 ವರ್ಷದ ಬಾಲಕಿ

ಆಂಧ್ರಪ್ರದೇಶ: ಕಾಡುಹಂದಿಗಳನ್ನು ಬೇಟೆಯಾಡಲು ಗನ್​ ಲೋಡ್ ಮಾಡುತ್ತಿದ್ದಾಗ ಗನ್ ಮಿಸ್‌ಫೈರ್ ಆಗಿದ್ದು, ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕಾಕಿನಾಡ ಜಿಲ್ಲೆಯ ತುಣಿಯ ವೆಲಮ ಕೋತೂರು ಬಳಿ ನಡೆದಿದೆ.

ಕಾಕಿನಾಡ ಜಿಲ್ಲೆಯ ತುಣಿ ಮಂಡಲದ ಲೊವಕೋತೂರು ಗ್ರಾಮದಲ್ಲಿ ವಾಸವಾಗಿರುವ ಪಲಿವೇಲ ರಾಜು ಮತ್ತು ನಾಗಮಣಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಧನ್ಯಶ್ರೀ (4) ಮಂಗಳವಾರ ಬೆಳಗ್ಗೆ ಮನೆಯಲ್ಲಿ ಆಟವಾಡುತ್ತಿದ್ದಾಗ ಪಕ್ಕದ ಮನೆಯಲ್ಲಿ ಬಂದೂಕು ಪೈರ್​ ಆಗಿ ಮೃತಪಟ್ಟಿದ್ದಾಳೆ.

ಪೊಲೀಸರ ಪ್ರಕಾರ, ವೇಲಮ ಕೋತೂರು ಗ್ರಾಮದ 4 ವರ್ಷದ ತಾಲಿಮೆಲ್ಲ ಧನ್ಯಶ್ರೀ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು, ಗ್ರಾಮದ ಹೊರವಲಯದಲ್ಲಿರುವ ಮಾವಿನ ತೋಟದ ಪಕ್ಕದ ಗುಡಿಸಲಿನಲ್ಲಿ ಕುಟುಂಬ ವಾಸವಾಗಿದೆ. ಬಾಲಕಿ ತನ್ನ ಸ್ನೇಹಿತರೊಂದಿಗೆ  ಆಟವಾಡುತ್ತಿದ್ದಾಗ, ಪಕ್ಕದ ಗ್ರಾಮದ ಸಿದ್ದಾಂತಪು ದುರ್ಗಾ ಪ್ರಸಾದ್ (30) ಎಂಬಾತ ಗನ್ ಲೋಡ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ. ಬಂದೂಕಿನಿಂದ ಹೊರಬಂದ ಗುಂಡು ನೇರವಾಗಿ ಬಂದು ಧನ್ಯಶ್ರೀಯ ಎದೆಯನ್ನು ಸೀಳಿದೆ. ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.  ಪೋಷಕರು ಮಗುವನ್ನು ಆಸ್ಪತ್ರೆಗೆ ಸಾಗಿಸಿದರು. ಅದನ್ನು ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಕುಟುಂಬಸ್ಥರ ಮಾಹಿತಿ ಮೇರೆಗೆ ಸಿಐ ಸನ್ಯಾಸಿರಾವ್ ಹಾಗೂ ಎಸ್‌ಎಸ್ ವಿಜಯಬಾಬು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತರ ಮನೆ ಬಳಿಯ ಸಿದ್ದಾಂತಪುವಿನ ದುರ್ಗಾಪ್ರಸಾದ್ ಎಂಬುವರು ಹಂದಿಗಳಿಗೆ ಗುಂಡು ಹಾರಿಸಲು ಬಂದೂಕಿನಲ್ಲಿ ಗುಂಡುಗಳನ್ನು ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದುರ್ಗಾಪ್ರಸಾದ್ ನನ್ನು ವಶಕ್ಕೆ ಪಡೆದು ಠಾಣೆಗೆ ಕಳುಹಿಸಿದ್ದಾರೆ.