ನ್ಯೂಸ್

ವಾಟರ್​ ಟ್ಯಾಂಕ್​ನಲ್ಲಿದ್ದವು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!

ರಾಯ್​ಪುರ: ರೈತ ಕುಟುಂಬವೊಂದನ್ನು ಕೊಲೆ ಮಾಡಲಾಗಿದ್ದು, ವಾಟರ್​ ಟ್ಯಾಂಕ್​ನ ಒಳಗೆ ತುಂಬಿಟ್ಟು ಹೋಗಿರುವ ಘಟನೆ ಚತ್ತೀಸಗಢದ ದರ್ಗ್​ ಜಿಲ್ಲೆಯಲ್ಲಿ ನಡೆದಿದೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ.

ದರ್ಗ್​ ಜಿಲ್ಲೆಯ ಅಮಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಖುದ್ಮುಡಾ ಗ್ರಾಮದ ನಿವಾಸಿ ಬಾಲರಾಜ್ ಸೋಂಕರ್ (60), ಅವರ ಪತ್ನಿ ದುಲಾರಿನ್ ಬಾಯಿ (55), ಪುತ್ರ ರೋಹಿತ್ (30) ಮತ್ತು ಸೊಸೆ ಕೀರ್ತಿ ಕೊಲೆಯಾಗಿರುವ ದುರ್ದೈವಿಗಳು. ಈ ನಾಲ್ವರ ದೇಹವು ವಾಟರ್​ ಟ್ಯಾಂಕ್​ ಒಳಗೆ ಪತ್ತೆಯಾಗಿದೆ. ರೋಹಿತ್​ ಅವರ 11 ವರ್ಷದ ಮಗ ಮನೆಯೊಳಗೆ ಮೂರ್ಚೆ ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.

ಈ ಕುಟುಂಬಕ್ಕೆ ಗ್ರಾಮದ ಹೊರಗೆ ಜಮೀನಿದ್ದು, ಅಲ್ಲಿಯೇ ಗುಡಿಸಲು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗ್ರಾಮಸ್ಥರೆಲ್ಲರೊಂದಿಗೂ ಕುಟುಂಬ ಸ್ನೇಹದಿಂದಿತ್ತು. ಮೇಲ್ನೋಟಕ್ಕೆ ಯಾವುದೇ ವೈರಿಗಳು ಕಂಡುಬಂದಿಲ್ಲ. ಪ್ರಕರಣದ ತನಿಖೆಗೆಂದು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಹಿಡಿದು, ಕೊಲೆಯ ಹಿಂದಿನ ರಹಸ್ಯ ಭೇದಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)