ನ್ಯೂಸ್

ಚುನಾವಣಾ ರ‍್ಯಾಲಿ ಗುರಿಯಾಗಿಸಿ ಬಾಂಬ್​ ದಾಳಿ; ನಾಲ್ವರು ಮೃತ್ಯು, ಹಲವರು ಗಂಭೀರ

ನವದೆಹಲಿ: ಸಾರ್ವತ್ರಿಕ ಚುನಾವಣೆಯ ಭರಾಟೆಯಲ್ಲಿ ಇರುವ ಪಾಕಿಸ್ತಾನದಲ್ಲಿ ಪ್ರಚಾರ ಕಣ ಹಲವು ಅಚ್ಚರಿ, ವಿವಾದ ಹಾಗೂ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಉಗ್ರರ ದಾಳಿ ಭೀತಿ ನಡುವಲ್ಲೇ ದೇಶಾದ್ಯಂತ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸುತ್ತಿವೆ. ಇನ್ನು ಈ ಮಧ್ಯೆ ಪಾಕಿಸ್ತಾನದಲ್ಲಿ ಚುನಾವಣಾ ರ‍್ಯಾಲಿಯನ್ನು ಗುರಿಯಾಗಿಸಿ ನಡೆದ ಬಾಂಬ್​ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್​ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷ ಬಲೂಚಿಸ್ತಾನದ ಸಿಬಿ ಪ್ರದೇಶದಲ್ಲಿ ಚುನಾವಣಾ ರ‍್ಯಾಲಿ ಒಂದನ್ನು ಆಯೋಜಿಸಿತ್ತು. ರ‍್ಯಾಲಿಯನ್ನು ಗುರಿಯಾಗಿಸಿ ನಡೆಸಿದ ಬಾಂಬ್​ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ಪಿಟಿಐ ಪಕ್ಷಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯಕೀಯ ಅಧೀಕ್ಷಕ ಡಾ.ಬಾಬರ್, ಬಾಂಬ್​ ಸ್ಫೋಟದಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ ಎಲ್ಲರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಉವ ಸಾಧ್ಯತೆಯಿದೆ. ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಈ ಸಮಯದಲ್ಲಿ ಬಾಂಬ್​ ಸ್ಫೋಟವಾಗಿರುವುದು ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ದಯವಿದ್ರಾವಕ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಪಿಟಿಐ ಕಾರ್ಯಕರ್ತರ ಬದಲಿಗೆ ಭಯೋತ್ಪಾದಕರನ್ನು ನಿಗ್ರಹಿಸುವತ್ತ ಗಮನ ಹರಿಸಬೇಕೆಂದು ಪಿಟಿಐ ಪಕ್ಷದ ವಕ್ತಾರ ಸಲಾರ್ ಖಾನ್ ಕಾಕರ್ ಕಿಡಿಕಾರಿದ್ದಾರೆ.