| ವಿರೂಪಾಕ್ಷ ಕಣವಿ ಮುಳಗುಂದ
ಮನೆಯಲ್ಲಿರುವವರೇ ನಾಲ್ವರು. ಪತಿ-ಪತ್ನಿ, ಇಬ್ಬರು ಪುತ್ರರು. ಎಲ್ಲರೂ ಮೂಕರೇ. ದುಡಿಯಬೇಕಾದ ಕೈಗೆ ಕೆಲಸವಿಲ್ಲ. ಸಂಕಷ್ಟದಲ್ಲಿ ಆಸರೆಯಾಗಬೇಕಾಗಿದ್ದ ಅಂಗವಿಕಲರ ಮಾಸಾಶನ 8 ತಿಂಗಳಾದರೂ ಬಂದಿಲ್ಲ. ಹೀಗಾಗಿ, ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಪಟ್ಟಣದ ಹರಣಶಿಕಾರಿ ಕಾಲನಿಯ ಲಿಂಗಪ್ಪ ಮಲ್ಲಪ್ಪ ಚವ್ಹಾಣ, ಇವರ ಪತ್ನಿ ಚಂದ್ರವ್ವ, ಮಕ್ಕಳಾದ ಗಂಗಪ್ಪ, ಮಹಾಂತೇಶ ಅವರ ಕತೆಯಿದು. ಲಿಂಗಪ್ಪ ಮಲ್ಲಪ್ಪ ಚವ್ಹಾಣ ಆರೋಗ್ಯ ಸರಿಯಿಲ್ಲ. ಮಹಾಂತೇಶ ಬುದ್ಧಿಮಾಂದ್ಯ. ಇವರಿಬ್ಬರನ್ನೂ ನೋಡಿಕೊಳ್ಳಲು ಚಂದ್ರವ್ವ ಮನೆಯಲ್ಲೇ ಇರಬೇಕಾಗಿದೆ. ಗಂಗಪ್ಪ ಕೆಲಸ ಮಾಡುತ್ತಿದ್ದ. ಆದರೀಗ ಕೆಲಸವಿಲ್ಲ.
ಲಿಂಗಪ್ಪ ಹಾಗೂ ಒಬ್ಬ ಮಗ ಪಟ್ಟಣದ ಹೋಟೆಲ್ವೊಂದರಲ್ಲಿ ಪಾತ್ರೆ ತೊಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, 15 ದಿನಗಳಿಂದ ಕೆಲಸವಿಲ್ಲ. ಮೊದಲು ಮನೆಯಲ್ಲಿ ನಾಲ್ವರಿಗೂ ಮಾಸಾಶನ ಬರುತ್ತಿತ್ತು. ಹಾಗೋ ಹೀಗೋ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಈಗ ಸುಮಾರು ಎಂಟು ತಿಂಗಳಿಂದ ಮಾಸಾಶನ ಬಂದಿಲ್ಲ. ಇದರಿಂದಾಗಿ ಹಸಿವಿನಿಂದ ಬಳಲುವಂತಾಗಿದೆ. ಇವರು ಮಾಡುವ ಸಂಜ್ಞೆಗಳು ಬೇರೆಯವರಿಗೆ ತಿಳಿಯುವುದಿಲ್ಲ. ಹೀಗಾಗಿ, ತುತ್ತಿನ ಚೀಲ ತುಂಬಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ.