ನವದೆಹಲಿ: ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ದಿಲೀಪ್ ಗಾಂಧಿ (70) ಅವರು ಬುಧವಾರ ಬೆಳಗ್ಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದಿಲೀಪ್ ಗಾಂಧಿ ಅವರಿಗೆ ಮಂಗಳವಾರ ಕರೊನಾ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.
ದಿಲೀಪ್ ಗಾಂಧಿ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಸಮುದಾಯ ಸೇವೆಗೆ ಮತ್ತು ಬಡವರಿಗೆ ಸಹಾಯ ಮಾಡಿದ್ದಕ್ಕಾಗಿ ದಿಲೀಪ್ ಅವರನ್ನು ಸದಾ ಸ್ಮರಿಸಲಾಗುವುದು. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಬಲಪಡಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನೀಡಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
80ರ ದಶಕದಲ್ಲಿ ಕಾರ್ಪೊರೇಟರ್ ಆಗಿ ರಾಜಕೀಯ ವೃತ್ತಿ ಆರಂಭಿಸಿದ ಗಾಂಧಿ, 1999ರಿಂದ ಮೂರು ಬಾರಿ ಮಹಾರಾಷ್ಟ್ರದ ಅಹ್ಮದ್ನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. 2003ರ ವಾಜಪೇಯಿ ಸರ್ಕಾರದಲ್ಲಿ ಹಡಗು ಸಚಿವಾಲಯದ ಸಚಿವರಾಗಿದ್ದರು.