ನ್ಯೂಸ್

ಮಾಜಿ ಪ್ರೇಯಸಿಯ ಮದುವೆ ನಿಲ್ಲಿಸಲು ಕೆಟ್ಟ ದಾರಿ ಹಿಡಿದ ಯುವಕನಿಗೆ ಕಾದಿತ್ತು ಬಿಗ್​ ಶಾಕ್​!

ತಿರುವನಂತಪುರ: ತನ್ನ ಮಾಜಿ ಪ್ರೇಯಸಿಗೆ ನಿಗದಿಯಾಗಿದ್ದ ವರನಿಗೆ ಮಾರ್ಫ್​ ಮಾಡಿದ ಅಶ್ಲೀಲ ಫೋಟೋಗಳನ್ನು ಕಳುಹಿಸುವ ಮೂಲಕ ಮದುವೆ ನಿಲ್ಲಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತನ್ನು 22 ವರ್ಷದ ಎಸ್​. ವಿಜಿನ್​ ಎಂದು ಗುರುತಿಸಲಾಗಿದೆ. ಈತ ಕಡುಕ್ಕಮೂಡುವಿನ ವೆಲ್ಲನಾಡು ಮೂಲದವನು.

ವಧು ಮತ್ತು ಆರೋಪಿ ಇಬ್ಬರು ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಇಬ್ಬರು ಬೇರೆಯಾದ ನಂತರ, ಯುವತಿಯ ಕುಟುಂಬವು ಇನ್ನೊಬ್ಬ ಯುವಕನೊಂದಿಗೆ ಅವಳ ಮದುವೆಯನ್ನು ನಿಗದಿಪಡಿಸಿತು.

ವಾಟ್ಸ್​ಆ್ಯಪ್​ಗೆ ಫೋಟೋ

ಮಾಜಿ ಪ್ರೇಯಸಿಗೆ ಮದುವೆ ನಿಶ್ವಯವಾದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಪ್ರಿಯಕರ ತಮ್ಮ ಪ್ರೀತಿಯ ದಿನಗಳಲ್ಲಿ ತೆಗೆದಿದ್ದ ಫೋಟೋಗಳನ್ನು ಮಾರ್ಫ್ ಮಾಡಿ, ಆಕೆಗೆ ನಿಗದಿಯಾಗಿದ್ದ ವರನ ವಾಟ್ಸ್​ಆ್ಯಪ್​ ನಂಬರ್​ಗೆ ಕಳುಹಿಸಿದ್ದಾನೆ. ಅಲ್ಲದೆ, ವರನ ಮನೆಗೆ ತೆರಳಿ ಆತನ ಪಾಲಕರಿಗೂ ಫೋಟೋಗಳನ್ನು ತೋರಿಸಿದ್ದಾನೆ. ಇದಾದ ಬಳಿಕ ಇಬ್ಬರ ಮದುವೆ ಮುರಿಬಿದ್ದಿದೆ.

ಯುವತಿ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಜಿನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಪ್ರೇಯಸಿಯ ಮದುವೆ ನಿಲ್ಲಿಸಲು ಈ ರೀತಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ವಿಜಿನ್​ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಿನ್‌ನನ್ನು ವಿಲಪ್ಪಿಲಸಾಲ ಇನ್ಸ್‌ಪೆಕ್ಟರ್ ಎನ್. ಸುರೇಶ್ ಕುಮಾರ್ ನೇತೃತ್ವದ ತಂಡವು ಬಂಧಿಸಿದೆ. (ಏಜೆನ್ಸೀಸ್​​)