ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ಶನಿವಾರ ನೇಮಿಸಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಎಲ್. ಮುರುಗನ್ ಈ ನೇಮಕ ಮಾಡಿದ್ದಾರೆ.
2011ರ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳಿಧರ್ ರಾವ್ ಹಾಗೂ ಎಲ್. ಮುರುಗನ್ ಸಮ್ಮುಖದಲ್ಲಿ ಪಕ್ಷ ಸೇರಿದ್ದರು.
ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಎಲ್. ಮುರುಗನ್, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ಅವರ ಭವಿಷ್ಯ ಯಶಸ್ವಿಯಾಗಿರಲಿ ಎಂದು ಶುಭ ಹಾರೈಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರು ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಕರೂರು ಜಿಲ್ಲೆಯ ಕೃಷಿ ಕುಟುಂಬದವರಾದ ಅಣ್ಣಾಮಲೈ, ಮೆಕಾನಿಕಲ್ ಇಂಜಿನಿಯರಿಂಗ್ ಹಾಗೂ ಐಐಎಂ ಲಖನೌನಿಂದ ಎಂಬಿಎ ಪದವಿಗಳಿಸಿದ್ದಾರೆ. ನಂತರ ನಾಗರೀಕ ಸೇವೆಗೆ ಸೇರಿದ್ದರು. (ಏಜೆನ್ಸೀಸ್)